ಶುಕ್ರವಾರ, ಅಕ್ಟೋಬರ್ 14, 2011

ಚಿಕ್ಕದೇವರಾಯರ ಕಾಲ

ವಿಜಯನಗರ ಸಾಮ್ರಾಜ್ಯ ನಾಶವಾದ ನಂತರ ಸಣ್ಣಪುಟ್ಟ ಪಾಳೆಯಗಾರರು, ಆಡಳಿತಗಾರರು ಹೆಚ್ಚಿದುದರಿಂದ ರಾಜ್ಯದಲ್ಲಿ ಕ್ಷೋಭೆಯುಂಟಾಗಿ ಅಶಾಂತಿ ನೆಲಸಿತು. ಹೀಗಾಗಿ ಸಾಹಿತ್ಯದಲ್ಲಿ ಹೆಚ್ಚು ಕೆಲಸ ನಡೆಯಲು ಸಾಧ್ಯವಾಗಲಿಲ್ಲ. ಈ ಸ್ಥಿತಿಯಲ್ಲಿದ್ದ ಕನ್ನಡ ಸಾಹಿತ್ಯವು ಪುನಃ ತಲೆಯೆತ್ತಿದ್ದು ಮೈಸೂರಿನ ಅರಸರ ಕಾಲದಲ್ಲಿ.
ಚಿಕ್ಕದೇವರಾಜ ಒಡೆಯರ್:
·         ಚಿಕ್ಕದೇವರಾಯರು ಸ್ವಯಂ ಕವಿಗಳು ಹಾಗೂ ಕವಿಪೋಷಕರು.
·         ಸ್ವತಃ ಗೀತಗೋಪಾಲ ಮತ್ತು ಚಿಕ್ಕದೇವರಾಜ ಬಿನ್ನಪಂ ಎಂಬ ಎರಡು ಗ್ರಂಥಗಳನ್ನು ರಚಿಸಿದ್ದಾರೆ.
·         ಚಿಕ್ಕದೇವರಾಯರು ಗೀತಗೋಪಾಲ ಕಾವ್ಯವನ್ನು ಜಯದೇವನ ಗೀತಗೋವಿಂದ ಸಂಸ್ಕೃತ ಗ್ರಂಥದ ಮಾದರಿಯನ್ನು ಅನುಸರಿಸಿ ರಚಿಸಿದಂತೆ ತೋರುತ್ತದೆ.
·         ಮೋಕ್ಷೋಪಾಯಮಂ ಸಾಧಿಸುವುದಕ್ಕೆ ಉಪಾಯವಾದ ಪ್ರಪತ್ತಿ ಸ್ವರೂಪವನ್ನು ಕೀರ್ತನೆಗಳ ಮೂಲಕ ತಿಳಿಸುವುದೇ ಕವಿಯ ಉದ್ದೇಶ.
·         ಕೀರ್ತನೆಗಳಲ್ಲಿ ಭಾಗವತವೇ ಮೊದಲಾದ ಪುರಾಣೇತಿಹಾಸಗಳಲ್ಲಿರುವ ಭಾಗವತೋತ್ತಮರ ಅಭಿಪ್ರಾಯಗಳೂ ಅಡಕವಾಗಿವೆ.
·         ಕವಿಯು ಮೊದಲಿಗೆ ತತ್ವವನ್ನು ವಚನದಲ್ಲಿ ಹೇಳಿ, ನಂತರ ಅದಕ್ಕೆ ಸಂಬಂಧಿಸಿದ ಕೀರ್ತನೆಯನ್ನು ಹೇಳಿರುವುದು ವಿಶೇಷವಾಗಿದೆ.
·         ಸುಲಭ ಮಾತುಗಳಲ್ಲಿ ಮಹತ್ವದ ವಿಷಯಗಳನ್ನು ಸಂಗೀತಕ್ಕೆ ಹೊಂದುವ ಹಾಗೆ ಹೇಳಿರುವುದು ಕವಿಯ ಚಾತುರ್ಯ.
·         ತಿರುಮಲಾರ್ಯ, ಸಿಂಗರಾರ್ಯ, ಚಿಕ್ಕುಪಾಧ್ಯಾಯ ಎಂಬ ಕವಿಗಳೂ, ಹೊನ್ನಮ್ಮ ಎಂಬ ಕಬ್ಬಿಗಿತಿಯೂ ಚಿಕ್ಕದೇವರಾಯರ ಆಶ್ರಿತರಾಗಿದ್ದರು.
ತಿರುಮಲಾರ್ಯ:
·         ತಿರುಮಲಾರ್ಯ ಕವಿಯು ಅಪ್ರತಿಮವೀರ ಚರಿತೆ ಎಂಬ ಅಲಂಕಾರಶಾಸ್ತ್ರ ಗ್ರಂಥವನ್ನು ರಚಿಸಿದರು.
·         ಚಿಕ್ಕದೇವರಾಯರಿಗೆ ಅಪ್ರತಿಮವೀರ ಎಂಬ ಬಿರುದು ಇದ್ದುದಾಗಿ ತಿಳಿಯುತ್ತದೆ.
·         ಚಿಕ್ಕದೇವರಾಯ ವಂಶಾವಳಿಯಲ್ಲಿ ದೊರೆಯ ಪೂರ್ವಿಕರ ಚರಿತ್ರೆಯೂ, ಶ್ರೀವೈಷ್ಣವ ಧರ್ಮದ ಸ್ವರೂಪವೂ ವರ್ಣಿತವಾಗಿದೆ.
·         ಚಿಕ್ಕದೇವರಾಜ ವಿಜಯಂ ಎಂಬ ಚಂಪೂ ಕೃತಿಯನ್ನೂ ತಿರುಮಲಾರ್ಯ ರಚಿಸಿರುವುದಾಗಿ ತಿಳಿಯುತ್ತದೆ.
ಚಿಕ್ಕುಪಾಧ್ಯಾಯ:
·         ಚಿಕ್ಕದೇವರಾಜರಲ್ಲಿ ಕರಣಿಕಾಗ್ರೇಸರನೂ ಮಂತ್ರಿಯೂ ಆಗಿದ್ದವನು ಚಿಕ್ಕುಪಾಧ್ಯಾಯ.
·         ಶ್ರೀವೈಷ್ಣವ ಬ್ರಾಹ್ಮಣನಾಗಿದ್ದ ಚಿಕ್ಕುಪಾಧ್ಯಾಯ ಕನ್ನಡದಲ್ಲಿ ಅನೇಕ ಗ್ರಂಥಗಳನ್ನು ರಚಿಸಿದನು.
·         ದಿವ್ಯಸೂರಿ ಚರಿತ್ರೆ, ರುಕ್ಮಾಂಗದ ಚರಿತ್ರೆ, ವಿಷ್ಣುಪುರಾಣ, ಕಮಲಾಚಲ ಮಹಾತ್ಮ್ಯೆ, ಹಸ್ತಿಗಿರಿ ಮಹಾತ್ಮ್ಯೆ ಮೊದಲಾದ ಚಂಪೂ ಕೃತಿಗಳನ್ನೂ ಪಶ್ಚಿಮರಂಗ ಮಹಾತ್ಮ್ಯೆ ಮೊದಲಾದ ಸಾಂಗತ್ಯ ಗ್ರಂಥಗಳನ್ನೂ ಶುಕಸಪ್ತತಿ, ಕಾಮಂದಕನೀತಿ ಮೊದಲಾದ ಹಲವು ಗದ್ಯ ಗ್ರಂಥಗಳನ್ನು ಚಿಕ್ಕುಪಾಧ್ಯಾಯ ಬರೆದಿರುವುದಾಗಿ ತಿಳಿಯುತ್ತದೆ.
·         ವಿಷ್ಣುಪುರಾಣವನ್ನು ಚಂಪೂರೂಪದಲ್ಲಿ ಮಾತ್ರವಲ್ಲದೆ ಗದ್ಯರೂಪದಲ್ಲಿಯೂ ಬರೆದಿದ್ದಾನೆ.
·         ಶ್ರೀವೈಷ್ಣವ ಧರ್ಮ ಪ್ರಚಾರ ಈತನಿಗೆ ಕಾವ್ಯರಚನೆಯಲ್ಲಿದ್ದ ಉದ್ದೇಶ.
·         ಈತನ ನಿಜವಾದ ಹೆಸರು ಲಕ್ಷ್ಮೀಪತಿಯೆಂದೂ, ತೆರಕಣಾಂಬಿಯು ಈತನ ಜನ್ಮಸ್ಥಳ ಎಂದೂ ತಿಳಿದಿದೆ.
ಸಿಂಗರಾರ್ಯ:
·         ಸಿಂಗರಾರ್ಯನು ಸಂಸ್ಕೃತದಲ್ಲಿ ಶ್ರೀಹರ್ಷ ಬರೆದ ರತ್ನಾವಳಿಯ ಮಾದರಿಯನ್ನು ಅನುಸರಿಸಿ, ಶ್ರೀಕೃಷ್ಣ ಮಿತ್ರವಿಂದೆಯನ್ನು ಮದುವೆಯಾದ ಕಥೆಯನ್ನು ನಾಟಕರೂಪದಲ್ಲಿ ಮಿತ್ರವಿಂದಾ ಗೋವಿಂದ ಎಂಬ ಹೆಸರಿನಲ್ಲಿ ರಚಿಸಿದನು.
·         ಮಿತ್ರವಿಂದಾ ಗೋವಿಂದ ಕನ್ನಡದ ಮೊದಲ ನಾಟಕ ಎಂಬ ಕಾರಣದಿಂದ ಪ್ರಾಶಸ್ತ್ಯವನ್ನು ಪಡೆದುಕೊಂಡಿದೆ.
·         ಈ ಕಾಲಕ್ಕೆ ಯಕ್ಷಗಾನಗಳು ಬಳಕೆಯಲ್ಲಿದ್ದುವೆಂದು ಕಂಡುಬರುತ್ತದೆ.
ಹೊನ್ನಮ್ಮ:
·         ಈಕೆ ಸಿಂಗರಾರ್ಯನ ಶಿಷ್ಯೆ.
·         ಹದಿಬದೆಯ ಧರ್ಮ ಕೃತಿಯನ್ನು ಸಾಂಗತ್ಯದಲ್ಲಿ ರಚಿಸಿ ಮೆಚ್ಚಿಸಿದಾಕೆ ಹೊನ್ನಮ್ಮ.
·         ಈಕೆ ಚಿಕ್ಕದೇವರಾಜ ಒಡೆಯರ್ ಅವರ ಅಂತಃಪುರದಲ್ಲಿ ಸಂಚಿಯ ಊಳಿಗದವಳಾಗಿದ್ದಳು.
·         ಅರಸಿಯ ಆಜ್ಞೆಯಿಂದಾಗಿ ತಾನು ಈ ಗ್ರಂಥವನ್ನು ಬರೆಯತೊಡಗಿದ್ದಾಗಿ ಹೊನ್ನಮ್ಮ ಹೇಳಿಕೊಂಡಿದ್ದಾಳೆ.
·         ಪತಿವ್ರತೆಯರಾದ ಹೆಂಗಸರು ಹೇಗೆ ನಡೆದುಕೊಳ್ಳಬೇಕು ಎಂಬುದೇ ಈ ಕೃತಿಯ ವಸ್ತುವಿಷಯ.
·         ಹೊನ್ನಮ್ಮನ ಹಲವು ಅಭಿಪ್ರಾಯಗಳು ಈ ಕಾಲದ ನಮಗೆ ಒಪ್ಪಿಗೆಯಾಗದಿದ್ದರೂ ಆಕೆ ಸುಲಲಿತವಾಗಿ ಹಲವು ನೀತಿಗಳನ್ನು ಹೇಳಿರುವ ರೀತಿ ಮೆಚ್ಚುಗೆಯಾಗುತ್ತದೆ.
·         ಸಂಚಿಯ ಹೊನ್ನಮ್ಮನ ಹದಿಬದೆಯ ಧರ್ಮ ಚೆಲುವಾದ ತಿಳಿಗನ್ನಡದ ಲಲಿತಗ್ರಂಥವಾಗಿದ್ದು ಸರ್ವಜನಗ್ರಾಹ್ಯವಾಗಿದೆ.
ಷಡಕ್ಷರದೇವ:
·         ಈತನ ಕಾಲ ಕ್ರಿ.. ಸುಮಾರು 1655.
·         ರಾಜಶೇಖರ ವಿಲಾಸ, ವೃಷಭೇಂದ್ರ ವಿಜಯ ಹಾಗೂ ಶಬರಶಂಕರವಿಲಾಸ ಎಂಬ ಮೂರು ಗ್ರಂಥಗಳನ್ನು ಬರೆದಿದ್ದಾನೆ.
·         ಷಡಕ್ಷರದೇವನು ಎ()ಳಂದೂರು ಮಠಕ್ಕೆ ಸ್ವಾಮಿಯಾಗಿದ್ದನೆಂದು ಅಲ್ಲಿಯೇ ಸಮಾಧಿಯನ್ನು ಹೊಂದಿದನೆಂದು ತಿಳಿದಿದೆ.
·         ಸಂಸ್ಕೃತ-ಕನ್ನಡಗಳೆರಡರಲ್ಲೂ ಪಾಂಡಿತ್ಯ ಪಡೆದಿದ್ದ ಈತನ ನಿರರ್ಗಳ ಶೈಲಿ, ಚಮತ್ಕಾರದ ವರ್ಣನೆಗಳು ಜನರ ಮನ್ನಣೆಗೆ ಪಾತ್ರವಾಗಿವೆ.
ವೆಂಕಟಾರ್ಯ ಶಿಷ್ಯ:
·         ಈ ಕವಿ ಶ್ರೀಕೃಷ್ಣಗೋಪೀ ವಿಲಾಸಂ ಎಂಬ ಗ್ರಂಥವನ್ನು ಬರೆದನು.
·         ಈತನ ನಿಜವಾದ ಹೆಸರು ತಿಳಿದಿಲ್ಲ.
·         ಶುಕಮಹಾ ಯೋಗೀಂದ್ರರು ಈ ಕಥೆಯನ್ನು ಹರಿಭಕ್ತ ಪರೀಕ್ಷಿತನಿಗೆ ಸಕಲಾಗಮಾರ್ಥ ಸಂಗ್ರಹ ಎಂದು ಹೇಳಿದರಂತೆ.
·         ಈ ಗ್ರಂಥದ ಪೀಠಿಕೆಯಲ್ಲಿ ಕವಿ ಹೇಳಿಕೊಂಡಿರುವ ಮಾತು ಆ ಕಾಲದಲ್ಲಿ ಮತ್ತೆ ಉಂಟಾಗಿದ್ದ ಸಂಸ್ಕೃತದ ಪ್ರಾಬಲ್ಯವನ್ನು ಸೂಚಿಸುತ್ತದೆ.
ಗಂಗೆಯ ಗಾಜ ಕುಪ್ಪಿಗೆಯೊಳು ತರಲು ತಾಂ
ಗಂಗೆಯಹುದಲ್ಲದೆ ಜಲವಹುದೆ
ರಂಗನ ಕಥೆಯ ಭಾಷಾಂತರದೊಳು ಪೇಳೆ ತಾ
ಮಂಗಳಮಹಿಮೆ ತಪ್ಪುವುದೆ ?
·         ಭಗವಂತನ ಚರಿತ್ರೆಯನ್ನು ಕನ್ನಡದಲ್ಲಿ ಹೇಳಿದರೆ ಅದು ಅಪವಿತ್ರವಾಗುವುದಿಲ್ಲ; ಅದರ ಮಹಿಮೆ ಕುಗ್ಗುವುದಿಲ್ಲ ಎಂಬುದು ಅವನ ಅಭಿಪ್ರಾಯ.
ಭಟ್ಟಾಕಳಂಕ:
·         ಶಬ್ದಾನುಶಾಸನ ಎಂಬ ಕನ್ನಡ ವ್ಯಾಕರಣವನ್ನು ಸಂಸ್ಕೃತದಲ್ಲಿ ಬರೆದ ಭಟ್ಟಾಕಳಂಕ ಕನ್ನಡವು ಸಂಸ್ಕೃತಕ್ಕಿಂತ ಯಾವ ವಿಧದಲ್ಲೂ ಕಡಿಮೆಯಿಲ್ಲ ಎಂದು ಸ್ಥಾಪಿಸಲು ಬಹಳ ಪ್ರಯಾಸಪಟ್ಟಿದ್ದಾನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ