ಶುಕ್ರವಾರ, ಆಗಸ್ಟ್ 23, 2013

ಹತ್ತನೆಯ ಶತಮಾನದ ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಪರಿಸರದ ಪರಿಚಯದ ಜೊತೆಗೆ ಕವಿ ಪಂಪನ ಕಾಲ, ದೇಶದ ವಿವರ

೧೦ನೆಯ ಶತಮಾನ ದಕ್ಷಿಣ ಭಾರತದ ಇತಿಹಾಸದಲ್ಲಿ ರಾಷ್ಟ್ರಕೂಟರ ಪ್ರಾಬಲ್ಯದ ಕಾಲ. ೧೦ನೆಯ ಶತಮಾನದ ಆರಂಭದಲ್ಲಿ ರಾಷ್ಟ್ರಕೂಟರ ಮುಮ್ಮಡಿ ಕೃಷ್ಣ ಆಳ್ವಿಕೆ ನಡೆಸುತ್ತಿದ್ದನು. ರಾಷ್ಟ್ರಕೂಟರ ರಾಜಕೀಯ ಪ್ರಭಾವ ತನ್ನ ಪರಮಾವಧಿಗೆ ತಲುಪಿದ್ದು ಮುಮ್ಮಡಿ ಕೃಷ್ಣನ ಕಾಲದಲ್ಲಿ ಅಂದರೆ ಕ್ರಿ.ಶ. ಸು.೯೩೯-೯೬೭ರ ಅವಧಿಯಲ್ಲಿ. ಇದೇ ಪಂಪನ ಬದುಕು ಮತ್ತು ಕೃತಿರಚನೆಯ ಕಾಲವೂ ಆಗಿರುವುದು ವಿಶೇಷ.
ಈ ಹೊತ್ತಿಗೆ ರಾಷ್ಟ್ರಕೂಟರು ದಕ್ಷಿಣದಲ್ಲಿ ತಂಜಾವೂರಿನವರೆಗೂ ಹಾಗೂ ಉತ್ತರದಲ್ಲಿ ಬುಂದೇಲ್‌ಖಂಡದ ತನಕ ತಮ್ಮ ರಾಜ್ಯವನ್ನು ವಿಸ್ತರಿಸಿದ್ದರು. ರಾಷ್ಟ್ರಕೂಟರು ಸಿಂಧೂ ಪ್ರಾಂತ್ಯದ ಮೂಲೆಗೆ ಸಹ ದಂಡೆತ್ತಿ ಹೋಗಿದ್ದರೆಂದು ಅರಬ್ಬರು ಹೇಳುತ್ತಾರೆ. ರಾಜ್ಯವಿಸ್ತರಣೆಯ ಸಂದರ್ಭದಲ್ಲಿ ಯುದ್ಧವು ಸಾಮಾನ್ಯವಾಗಿದ್ದಂತೆಯೇ ಪೂರಕವಾಗಿ ರಾಷ್ಟ್ರಕೂಟರು ಗಂಗರೊಂದಿಗೆ ಸಂಬಂಧ ಬೆಳಸಿ ಅವರ ನೆರವಿನಿಂದ ಚೋಳರ ವಿರುದ್ಧ ಯುದ್ಧಗಳನ್ನು ನಡೆಸುತ್ತಿದ್ದರು. ಮುಮ್ಮಡಿ ಕೃಷ್ಣನು ಗಂಗ ಬೂತುಗನ ಸಹಾಯದೊಂದಿಗೆ ಚೋಳರ ವಿರುದ್ಧ ದಂಡೆತ್ತಿ ಹೋಗಿ ಚೋಳ ಯುವರಾಜ ರಾಜಾದಿತ್ಯನನ್ನು ನಿಗ್ರಹಿಸಿದನು. ತೊಂಡೈಮಂಡಲವನ್ನು ಗೆದ್ದು ಕಂಚಿಯಿಂದ ತಂಜಾವೂರಿನವರೆಗಿನ ಪ್ರದೇಶವನ್ನು ಆಕ್ರಮಿಸಿ ರಾಮೇಶ್ವರದ ತನಕ ಸಾಗಿ ವಿಜಯಸ್ತಂಭವನ್ನು ಸ್ಥಾಪಿಸಿದನು.
ಇದರಂತೆ ಉತ್ತರದ ದಂಡಯಾತ್ರೆಯನ್ನು ಕೈಗೊಂಡು ಬುಂದೇಲ್‌ಖಂಡದ ಚಂದೇಲರನ್ನು, ಮಾಳವದ ಪರಮಾರ ಸೀಯಕವರ್ಮನನ್ನು ಪರಾಜಿತಗೊಳಿಸಿ ರಾಷ್ಟ್ರಕೂಟರ ಅಧಿಕಾರವನ್ನು ನರ್ಮದೆಯ ಉತ್ತರಕ್ಕೂ ಹಬ್ಬಿಸಲಾಗಿತ್ತು.
ಪೂರ್ವ ಚಾಲುಕ್ಯರಿಗೆ ನೆರವಾಗಿ ಹಳೆಯ ಶತೃತ್ವ ತಗ್ಗಿಸಲು ಯತ್ನಿಸುತ್ತಿದ್ದರು. ಪೂರ್ವ ಚಾಲುಕ್ಯರ ನೆಲೆಯಾದ ವೆಂಗಿಮಂಡಲದಲ್ಲಿ ತಲೆದೋರಿದ್ದ ಅಂತಃಕಲಹಗಳಲ್ಲಿ ಪ್ರವೇಶಿಸಿ ತನಗೆ ಅನುಕೂಲನಾದ ವ್ಯಕ್ತಿಗೆ ವೆಂಗಿರಾಜ್ಯವನ್ನು ವಹಿಸಿಕೊಟ್ಟು ಅವರು ರಾಷ್ಟ್ರಕೂಟರ ಆಳ್ವಿಕೆಯನ್ನು ಒಪ್ಪುವ ಹಾಗೆ ಕೃಷ್ಣನು ಮಾಡಿದನು.
ವಿಸ್ತಾರವಾದ ರಾಜ್ಯ ಪರಿಪಾಲನೆಯಲ್ಲಿ ಹೊಸನಾಡುಗಳನ್ನು ಗೆಲ್ಲುವ ಹಾಗೂ ಗಡಿಗಳನ್ನು ಹಿಗ್ಗಿಸುವ ಸಂಕಲ್ಪ-ಸಂಭ್ರಮಗಳಲ್ಲಿ ದೊರೆಗಳ ಹಾಗೂ ಸಾಮಂತರ ಜೊತೆಗೆ ಪ್ರಜೆಗಳೂ ಸಹಕರಿಸುತ್ತಿದ್ದರು. ವೀರತನ ಆ ಕಾಲದ ಆತ್ಮಾಭಿಮಾನದ ಮೌಲ್ಯವೇ ಆಗಿತ್ತು.
ಪಂಪಕವಿಯ ಆಶ್ರಯದಾತ ವೇಮುಲವಾಡ ಚಾಲುಕ್ಯ ವಂಶದ ಇಮ್ಮಡಿ ಅರಿಕೇಸರಿ. ಈತ ಮುಮ್ಮಡಿ ಕೃಷ್ಣನ ಪ್ರಬಲ ಸಾಮಂತನಾಗಿದ್ದ. ಅರಿಕೇಸರಿಯು ರಾಷ್ಟ್ರಕೂಟ ಇಂದ್ರನ ಪುತ್ರಿ ರೇವಕನಿಮ್ಮಡಿಯನ್ನು ವರಿಸಿದ್ದನೆಂಬುದಾಗಿ ವೇಮುಲವಾಡ ಶಾಸನದಲ್ಲಿ ಹೇಳಲಾಗಿದೆ. ರಾಷ್ಟ್ರಕೂಟರ ೪ನೆಯ ಗೋವಿಂದ ಚಾಲುಕ್ಯರ ವಿಜಯಾದಿತ್ಯನ ಮೇಲೆ ಮುಳಿಯಲು, ವಿಜಯಾದಿತ್ಯನು ಅರಿಕೇಸರಿಗೆ ಶರಣು ಹೋಗಲು, ಅರಿಕೇಸರಿಯು ರಕ್ಷಣೆಯ ನೀಡಿದನೆಂದು ವೇಮುಲವಾಡ ಶಾಸನ ಹಾಗೂ ಪಂಪಕವಿಯ ವಿಕ್ರಮಾರ್ಜುನ ವಿಜಯ ಕೃತಿಗಳಿಂದ ತಿಳಿಯುತ್ತದೆ. ರಾಷ್ಟ್ರಕೂಟರ ಇತಿಹಾಸದಲ್ಲಿ ವೇಮುಲವಾಡ ಚಾಲುಕ್ಯರು (ವಿಶೇಷವಾಗಿ ಇಮ್ಮಡಿ ಅರಿಕೇಸರಿ) ಮುಖ್ಯ ಪಾತ್ರ ವಹಿಸಿದರೆಂದು ಅಂದಿನ ರಾಜಕೀಯ ಚಟುವಟಿಕೆಗಳಿಂದ ತಿಳಿಯಬಹುದಾಗಿದೆ.
ಶ್ರೀ ಆರ್.ಎಸ್.ಪಂಚಮುಖಿಯವರು ಆ ಕಾಲದ ರಾಜಕೀಯ ನಕ್ಷೆಯ ಬಗ್ಗೆ ವಿವರವಾಗಿ ತಿಳಿಸಿದ್ದಾರೆ. ಅವರ ವಿಚಾರಗಳಲ್ಲಿನ ಮುಖ್ಯಾಂಶಗಳು ಹೀಗಿವೆ.
·        ರಾಜಕಾರಣದಲ್ಲಿ ಚಕ್ರವರ್ತಿಗಳು ದುರ್ಬಲರಾಗಿದ್ದರು.
·        ಮಾಂಡಲಿಕ ರಾಜರು ತಮ್ಮ ಪರಾಕ್ರಮಾತಿಶಯಗಳಿಂದ ರಾಜ್ಯದ ನಿರ್ವಾಹಕರಲ್ಲಿ ಜನರಲ್ಲಿ ಗಣ್ಯ ಸ್ಥಾನ ಪಡೆಯುತ್ತಿದ್ದರು.
·        ರಾಜ್ಯ ವಿಸ್ತಾರವಾದಂತೆ ಮಾಂಡಲಿಕರನ್ನು ಅಲ್ಲಲ್ಲಿ ನೇಮಿಸಿದ್ದರಿಂದ ಅಷ್ಟೊಂದು ವಿಶಾಲವಾದ ದೇಶದಲ್ಲಿ ನಿರಾಬಾಧಿತವಾದ ತಮ್ಮ ಅಂಕವನ್ನು ಸ್ಥಿರಪಡಿಸಲು ರಾಷ್ಟ್ರಕೂಟರಿಗೆ ಸಾಧ್ಯವಾಗಲಿಲ್ಲ.
·        ರಾಷ್ಟ್ರಕೂಟ ಸಾಮ್ರಾಜ್ಯದಲ್ಲಿ ಕ್ರಾಂತಿಕಾರದ ಬಂಡುಗಳೆದ್ದ ಕಾಲದಲ್ಲಿ ಲಾಟ, ಪಶ್ಚಿಮ ಗಂಗರ ನೆರವು ಪಡೆಯಲಾಗಿತ್ತು. ಗಂಗ ಬೂತುಗನಿಗೆ ರಾಷ್ಟ್ರಕೂಟ ಅಮೋಘವರ್ಷನು ಮಗಳಾದ ಚಂದ್ರೊಬ್ಬಲಬ್ಬೆಯನ್ನು ಕೊಟ್ಟು ಮದುವೆ ಮಾಡಿದನು.
ಇಲ್ಲಿಯವರೆಗೆ ವಿವರಿಸಲಾದ ರಾಜಕೀಯ ವಿದ್ಯಮಾನಗಳ ಕಾರಣದಿಂದಾಗಿ ಜನರಲ್ಲಿ ತ್ಯಾಗ-ಭೋಗಗಳು, ಶೌರ್ಯ-ಸ್ಥೈರ್ಯಗಳು ಗಮನಾರ್ಹವಾಗಿದ್ದವು. ಸ್ವಾಮಿಭಕ್ತಿ, ದೇಶಭಕ್ತಿಗಳು ಅನಿವಾರ್ಯವೆನಿಸುವಷ್ಟು ಮುಖ್ಯವಾದ ಮೌಲ್ಯಗಳಾಗಿದ್ದವು.
·        ಒಡೆಯನ ಸಲುವಾಗಿ ಪ್ರಾಣ ಕೊಡಲು ಸಿದ್ಧವಾಗಿರುವ ನಿಷ್ಠಾವಂತ ಆಳಿನ ಕರ್ತವ್ಯ ನಿಷ್ಠೆಗೆ ಲೆಂಕವಾಳಿ ಎಂದು ಹೆಸರು.
·        ಒಡೆಯನ ಉಪ್ಪಿನ ಹಂಗು, ಅನ್ನದ ಋಣ ತೀರಿಸುವ ಸಂಕಲ್ಪಕ್ಕೆ ಜೋಳವಾಳಿ ಹಾಗೂ ಒಡೆಯನು ಮರಣ ಹೊಂದಿದರೆ ಅವನ ಸೇವಕನು ತಾನೂ ಸಾಯುವುದಾಗಿ ಪ್ರತಿಜ್ಞೆ ಮಾಡಿ ಅದರಂತೆ ನಡೆದುಕೊಳ್ಳುವ ಪದ್ಧತಿಗೆ ವೇಳೆವಾಳಿ ಎಂದು ಹೆಸರು.
·        ಕಳ್ಳರು ಊರೊಳಗೆ ನುಗ್ಗಿ ದನಕರುಗಳನ್ನು ಸೆರೆ ಹಿಡಿದು ಗ್ರಾಮಧನವನ್ನು ಸೂರೆ ಮಾಡಿದಾಗ ಊರಿನ ಜನರು ದನಕರುಗಳನ್ನು ಬಿಡಿಸಿಕೊಂಡು ಬರಲು ಕೆಚ್ಚಿನಿಂದ ಹೋರಾಡುವ ಸಂದರ್ಭಗಳಿದ್ದವು. ಇವನ್ನು ತುರುಗೋಳ್ ಎಂದು ಕರೆಯುತ್ತಿದ್ದರು. ಸಂಸ್ಕೃತದ ಗೋಗ್ರಹಣ ಪದಕ್ಕೆ ಸಂವಾದಿಯಾದ ಕನ್ನಡ ಶಬ್ದವಿದು.
·        ಸಂಕಷ್ಟದಲ್ಲಿರುವ ಸ್ತ್ರೀಯರ ಮಾನರಕ್ಷಣೆಗೆ ಕೂಡ ಹೋರಾಟ ನಡೆಯುತ್ತಿದ್ದವು. ಇವನ್ನು ಪೆಣ್ಬುಯ್ಯಲ್ ಎಂದು ಕರೆಯಲಾಗಿತ್ತು. ಅದರಂತೆ ಪತಿಯ ಪರೋಕ್ಷದಲ್ಲಿ ಸತಿ ಸಹಗಮನ ಮಾಡುವಾಗ ಆಕೆಯ ಧೈರ್ಯ-ತ್ಯಾಗಗಳನ್ನು, ಪತಿಭಕ್ತಿಯ ಪರಾಕಾಷ್ಠೆಯನ್ನು ಮೆಚ್ಚಬೇಕಾಗುತ್ತದೆ. ಹೀಗೆ ಮಾಸ್ತಿಕಲ್ಲು, ವೀರಗಲ್ಲುಗಳನ್ನು ಹಾಕಿಸುವುದು ಹೆಚ್ಚಿತ್ತು.
·        ಗೆದ್ದು ಬಂದ ಶೂರರಿಗೆ ಚಿನ್ನದ ಕಡಗಗಳನ್ನು ತೊಡಿಸಿ, ಮಾನ್ಯ ಉಂಬಳಿಗಳನ್ನು ಹಾಕಿಸಿಕೊಟ್ಟು, ಸನ್ಮಾನಿಸುವ ಪದ್ಧತಿ ರೂಢಿಯಲ್ಲಿತ್ತು. ಸತ್ತ ಶೂರರ ಸಂಬಂಧಿಗಳಿಗೆ ಜೀವನ ನಿರ್ವಹಣೆಗೆಂದು ನೆತ್ತರು ಕೊಡುಗೆಗಳು ಸಲ್ಲುತ್ತಿದ್ದವು. ರಕ್ತಸಿಕ್ತವಾದ ಕತ್ತಿಯನ್ನು ತೊಳೆದು ಆಚರಿಸುವ ಪದ್ಧತಿಗೆ ಬಾಳ್ಗೞ್ಚು ಎಂದು ಹೆಸರು.
೧೦ನೆಯ ಶತಮಾನದ ಧಾರ್ಮಿಕ ಜೀವನ ಹೆಚ್ಚು ಉದಾರವೂ ಸಹಿಷ್ಣುವೂ ಆಗಿತ್ತು. ವರ್ಣ ಜಾತಿಗಳ ತರತಮ ಭಾವನೆ ಸ್ಪಷ್ಟವಾಗಿತ್ತು. ಕುಲಪ್ರಜ್ಞೆ ಉತ್ಕಟವಾಗಿತ್ತು. ಸಾಮಾಜಿಕ ವರ್ಗಗಳೂ, ಕಟ್ಟುಪಾಡುಗಳೂ ರೂಪಿತವಾಗಿದ್ದವು. ಜಾತಿ ಹುಟ್ಟಿನಿಂದ, ಧರ್ಮ ಆನಂತರ ಅಂಗೀಕರಿಸಬಹುದು ಎನ್ನುವುದು ಸಮ್ಮತಿಯೋಗ್ಯ. ಪಂಪ ಬ್ರಾಹ್ಮಣ ಮತ್ತು ಜೈನ ಧರ್ಮಗಳ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದನ್ನು ಗಮನಿಸಬಹುದು.
ಲೌಕಿಕರ ಜೀವನದಲ್ಲಿ ಮೌಲ್ಯಗಳಾಗಿ ನಿಷ್ಠೆ, ಸತ್ಯ, ತ್ಯಾಗ, ಶೌರ್ಯ, ದಾನ ಗುಣಗಳು ಹಾಗೂ ಧಾರ್ಮಿಕರ ಜೀವನದಲ್ಲಿ ಯೋಗ, ವೈರಾಗ್ಯ, ತಪಸ್ಸು, ಬ್ರಹ್ಮಚರ್ಯಗಳು ಅನುಸರಣಯೋಗ್ಯಗಳೆಂದು ಪ್ರತಿಪಾದಿತವಾಗುತ್ತಿದ್ದವು. ಕೆರೆ-ಕಟ್ಟೆ, ಬಸದಿ-ದೇಗುಲ, ಸತ್ರ-ಅರವಟ್ಟಿಗೆಗಳ ನಿರ್ಮಾಣ ಧರ್ಮದ ಭಾಗವಾಗಿತ್ತು. ಸಾಹಿತ್ಯ, ಲಲಿತಕಲೆ, ಸಂವಾದ, ರಸಿಕತೆ, ಸಹಾಯಬುದ್ಧಿ ವ್ಯಕ್ತಿ ಜೀವನದ ಮುಖ್ಯ ಲಕ್ಷಣಗಳೆಂದು ನಿರೂಪಿಸಲಾಗಿದೆ.
ಜೈನಧರ್ಮದ ಕ್ಷೀಣತೆಯ ಕಾಲವೆಂದು ೧೦ನೆಯ ಶತಮಾನವನ್ನು ಪರಿಗಣಿಸಲಾಗುತ್ತದೆ. ಶೈವ-ವೈಷ್ಣವ ಧರ್ಮಗಳ ಪ್ರಸಾರ ಹೆಚ್ಚುತ್ತಲೇ ಜೈನಧರ್ಮ ಸ್ಪರ್ಧೆಗಿಳಿದಂತಾಗಿತ್ತು. ಉತ್ತರ ಕರ್ನಾಟಕದಲ್ಲಿ ಚಾಲುಕ್ಯರು ಹಾಗೂ ದಕ್ಷಿಣ ಕರ್ನಾಟಕದಲ್ಲಿ ಚೋಳರು ವೈದಿಕ ಧರ್ಮಕ್ಕೆ ಒತ್ತಾಸೆ ನೀಡುತ್ತಿದ್ದರು. ಜೈನಧರ್ಮದ ಸಂಸ್ಕೃತ-ಕನ್ನಡ ಕವಿಗಳು ಪ್ರಬಲವಾಗಿ ಪ್ರಯತ್ನಗಳನ್ನು ನಡೆಸುತ್ತಿದ್ದರು. ಈ ಸ್ಥಿತಿಯಲ್ಲಿ ರಾಷ್ಟ್ರಕೂಟರು, ಗಂಗರು ಜೈನಧರ್ಮದ ಪೋಷಣೆಗೆ ನೆರವಾದ್ದರಿಂದ ಬಸದಿಗಳು ನಿರ್ಮಾಣವಾದವು, ಜೈನ ಪುರಾಣಗಳು ರಚನೆಗೊಂಡವು.
೧೦ನೆಯ ಶತಮಾನದಲ್ಲಿ ಮಠಗಳು, ಅಗ್ರಹಾರಗಳು ವಿದ್ಯಾಕೇಂದ್ರಗಳಾಗಿದ್ದವು. ದೊರೆಗಳೂ, ಸಾರ್ವಜನಿಕರೂ ಉದಾರ ಕೊಡುಗೆಗಳನ್ನು ನೀಡುತ್ತಿದ್ದರು. ವಿವಿಧ ವಿಷಯಗಳಲ್ಲಿ ವಿದ್ಯಾಭ್ಯಾಸ ದೊರೆಯುತ್ತಲೇ ಪ್ರೋತ್ಸಾಹ ಕೂಡ ಅಧಿಕವಾಗಿತ್ತು.
ರಾಜ್ಯವು ಕೃಷಿ, ಉತ್ಪಾದನೆ, ವ್ಯಾಪಾರ-ವಾಣಿಜ್ಯಗಳಿಂದ ಆರ್ಥಿಕವಾಗಿ ಸದೃಢವಾಗಿತ್ತು. ಸಾಹಿತ್ಯವನ್ನು ಪೋಷಿಸುವವರ ಸಂಖ್ಯೆ ಹೆಚ್ಚಿತ್ತು. ಆಗಿನ ಧಾರ್ಮಿಕ ಸಂಸ್ಥೆಗಳು ಲೌಕಿಕ ಮತ್ತು ಧಾರ್ಮಿಕ ಶಿಕ್ಷಣಗಳನ್ನು ನೀಡುತ್ತಿದ್ದವು. ಸಂಸ್ಕೃತ, ಕನ್ನಡ - ಎರಡೂ ಭಾಷೆಗಳಲ್ಲಿ ಸಾಹಿತ್ಯಿಕ ಚಟುವಟಿಕೆಗಳು ನಡೆದುದು ಸಹಜವಾಗಿತ್ತು.
೧೦ನೆಯ ಶತಮಾನವು ಸಾಹಿತ್ಯೋಜ್ಜೀವನದ ಕಾಲ. ಐಹಿಕ-ಪಾರಲೌಕಿಕಗಳನ್ನು ಸಮನ್ವಯಿಸಿಕೊಂಡು ಜೀವನಶ್ರದ್ಧೆಯ ಬೆಳಕಿನಲ್ಲಿ ಶಿಕ್ಷಣ ನಡೆಯುತ್ತಿತ್ತು. ವಿದ್ವಾಂಸ ಗುರುಗಳಲ್ಲಿ ಧರ್ಮ-ಕಾವ್ಯಶಾಸ್ತ್ರ ವ್ಯಾಸಂಗವನ್ನು ಸಾಂಗವಾಗಿ ಪೂರ್ಣಗೊಳಿಸುವ ಮೊದಲು ಸ್ವಂತವಾಗಿ ಕಾವ್ಯರಚನೆಗೆ ತೊಡಗುತ್ತಿರಲಿಲ್ಲ. ಕೆಲವೇ ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ರಚಿಸಿ ಕೃತಕೃತ್ಯರಾಗುತ್ತಿದ್ದರು. ಅರ್ಹತೆ ಹಾಗೂ ಜನಪ್ರಿಯತೆಗೆ ಅನುಸಾರವಾಗಿ ರಾಜಾಶ್ರಯವೂ, ವಿದ್ವಜ್ಜನರ ಪ್ರೋತ್ಸಾಹವೂ ದೊರೆಯುತ್ತಿತ್ತು. ಆ ಕಾಲದ ಪ್ರಚಲಿತ ಮೌಲ್ಯಗಳ ಪರಿಸ್ಥಿತಿಗಳ ಹಾಗೂ ವಿದ್ಯಮಾನಗಳ ಪ್ರತಿಬಿಂಬವನ್ನು ಕೃತಿಗಳಲ್ಲಿ ಕಾಣಬಹುದಾಗಿದೆ. ಕವಿಗಳೆಲ್ಲ ಜೀವನಪ್ರೀತಿ, ಸೌಂದರ‍್ಯಾಸ್ವಾದದ ದೃಷ್ಟಿಗಳು ತುಂಬಿದ ಸಾಂಸಾರಿಕ ಧರ್ಮವನ್ನು ಪೋಷಿಸಿಕೊಂಡೇ ಸ್ವಮತದಲ್ಲಿ ನಿಷ್ಠೆ, ಅನ್ಯಮತದಲ್ಲಿ ಸಹಿಷ್ಣುತೆಗಳು ಜಾಗೃತವಾಗಿರುವ ಉದಾರ ಮಾನವಧರ್ಮವನ್ನು ಪಾಲಿಸುತ್ತಿದ್ದರು. ಸಾಮರಸ್ಯ, ಸೌಖ್ಯವನ್ನು ಸಾಧಿಸುವ ಹೆದ್ದಾರಿಗಳು ಈ ಕವಿಗಳ ಸಾಧನೆಗಳಿಂದ ನಿರ್ಮಾಣವಾಗಿವೆ.
ಪಂಪ ಕವಿಯ ಕಾಲ-ದೇಶದ ವಿಚಾರ:
ಪಂಪನ ಜೀವನದ ಸಂಗತಿಗನ್ನು ತಿಳಿಯಲು ೧) ಆದಿಪುರಾಣ, ೨) ಪಂಪಭಾರತ (ವಿಕ್ರಮಾರ್ಜುನ ವಿಜಯ) ಹಾಗೂ ೩) ಆಂದ್ರಪ್ರದೇಶದ ಕರೀಂನಗರ್ ಜಿಲ್ಲೆಗೆ ಸೇರಿದ ಕುರ್ಕ್ಯಾಲ ಗ್ರಾಮದ ಬಂಡೆಗಲ್ಲು ಶಾಸನ ಪ್ರಮುಖವಾದ ಆಕರಗಳಾಗಿವೆ. ಜೊತೆಗೆ ಅರಿಕೇಸರಿಯ ಕರೀಂನಗರ ಮ್ಯೂಸಿಯಂ ಶಾಸನ ಹಾಗೂ ವೇಮುಲವಾಡದ ಶಿಲಾಶಾಸನಗಳು ಆಧಾರವಾಗುತ್ತವೆ.
ಪಂಪ ಹುಟ್ಟಿದ್ದು ಶಾಲಿವಾಹನ ಶಕ ೮೨೪ರ ದುಂದುಭಿನಾಮ ಸಂವತ್ಸರದಲ್ಲಿ. ಇದು ಕ್ರಿ.ಶ. ೯೦೨-೯೦೩ಕ್ಕೆ ಸರಿಯಾಗುತ್ತದೆ. ಕುರ್ಕ್ಯಾಲ ಶಾಸನವು ರಚಿತಗೊಂಡಿರಬಹುದಾದ ಕ್ರಿ.ಶ. ಸು.೯೫೦ರ ಒಳಗೆ ಪಂಪ ತೀರಿಕೊಂಡಿರಬೇಕು ಎಂಬುದಕ್ಕೆ ಶಾಸನದಲ್ಲಿ ಕೆಲವು ಸೂಚ್ಯ ಸಾಕ್ಷಿಗಳಿವೆ. ಹೀಗಾಗಿ ಅವನ ಜೀವಿತ ಕಾಲವನ್ನು ಬಹುಶಃ ೯೦೨-೯೫೦ ಎಂದು ಹೇಳಲಾಗುತ್ತಿದೆ.
ಶಾಲಿವಾಹನ ಶಕ ೮೬೩ರ ಪ್ಲವನಾಮ ಸಂವತ್ಸರದಲ್ಲಿ ಅಂದರೆ ಕ್ರಿ.ಶ. ೯೪೧-೪೨ಕ್ಕೆ ಹೊಂದುವ ಕಾಲದಲ್ಲಿ ಪಂಪನು ಆದಿಪುರಾಣವನ್ನು ರಚಿಸಿದನು. ಆಗ ಪಂಪನಿಗೆ ೪೦ ವರ್ಷ ವಯಸ್ಸಾಗಿತ್ತು. ಆದಿಪುರಾಣವನ್ನು ಕ್ರಿ.ಶ. ೯೪೨ರಲ್ಲಿ ಕೇವಲ ಮೂರು ತಿಂಗಳ ಅವಧಿಯೊಳಗೆ ರಚಿಸಿದ ಮೇಲೆ ಅರಿಕೇಸರಿಯ ಕೋರಿಕೆಯಂತೆ ಪಂಪಭಾರತವನ್ನು ರಚಿಸಿರಬೇಕು. ಜೊತೆಗೆ ವೇಮುಲವಾಡದ ಶಾಸನದ ಕಾಲದಿಂದ ಪಂಪ ಅರಿಕೇಸರಿಯ ಆಸ್ಥಾನವನ್ನು ತನ್ನ ೨೦-೨೫ರ ಹರೆಯದಲ್ಲಿ ಸೇರಿರುವುದು ಸಾಧ್ಯವೆಂದು ಹೇಳಬಹುದು. ಅಲ್ಲದೇ ಅರಿಕೇಸರಿಯ ವೇಮುಲವಾಡ ಶಾಸನದ ಕರ್ತೃವು ಪಂಪನೇ ಆಗಿರಬಹುದು ಎಂಬ ಊಹೆಯೂ ಇದೆ.
ಕುರ್ಕ್ಯಾಲ ಶಾಸನದ ಆಧಾರದಿಂದ ಪಂಪನ ಜನನ ತನ್ನ ತಾಯಿಯ ತವರುಮನೆ - ಅಣ್ಣಿಗೇರಿಯಲ್ಲಿ ಆಗಿರಬಹುದೆಂದು ಊಹಿಸಲಾಗಿದೆ. ಪಂಪನ ಜನನ-ಬಾಲ್ಯ-ಯೌವನಗಳಿಗೆ ಈಗಿನ ಕರ್ನಾಟಕದ ಧಾರವಾಡ-ಗದಗ-ಉತ್ತರ ಕನ್ನಡ ಜಿಲ್ಲೆಗಳ ಪ್ರದೇಶ ತೂಗುತೊಟ್ಟಿಲಾಗಿರಬೇಕು. ಶಸ್ತ್ರ-ಶಾಸ್ತ್ರಗಳ ವಿದ್ಯಾಭ್ಯಾಸವೂ ಈ ಪ್ರದೇಶಗಳಲ್ಲೇ ನಡೆದಿರಬೇಕು. ಪಂಪನ ಬಾಲ್ಯ-ಯೌವನಗಳು ಬನವಾಸಿ/ಬೆಳ್ವೊಲ ಪ್ರಾಂತದಲ್ಲಿಯೂ ಕ್ರಿಯಾಶೀಲವಾದ ವೃತ್ತಿ-ಸಾಹಿತ್ಯಿಕ ಜೀವನವು ಸಬ್ಬಿನಾಡಿನಲ್ಲಿಯೂ (ಬೋದನ-ವೇಮುಲವಾಡಗಳ ಪ್ರದೇಶ) ಜರುಗಿರುವುದು ಸ್ಪಷ್ಟವಾಗಿದೆ. ಪಂಪಭಾರತದಲ್ಲಿ ಧಾರವಾಡ-ಉತ್ತರ ಕನ್ನಡ ಸೀಮೆಯ ಗೋಕರ್ಣನಾಥನನ್ನು, ವನವಾಸಿ/ಬನವಾಸಿ ದೇಶವನ್ನು ಪ್ರೀತಿಯಿಂದ ನೆನೆಯುತ್ತಾನೆ. ವರದಾ ನದಿಯ ಪ್ರಸ್ತಾಪದ ಜೊತೆಗೆ ಪುಲಿUರೆಯ ತಿರುಳ್ಗನ್ನಡವನ್ನು ಹೇಳುತ್ತಾನೆ. ಈಗಿನ ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಲಕ್ಷ್ಮೇಶ್ವರವೇ ಆ ಪುಲಿಗೆರೆ.
ಅರಿಕೇಸರಿಯ ಆಸ್ಥಾನಕ್ಕೆ ಪಂಪನೇ ಮೊದಲು ಬಂದದ್ದು. ಗೌರವ, ಸನ್ಮಾನಗಳ ಫಲವಾಗಿ ಅಲ್ಲಿಯೆ ನೆಲೆಸಿರಬಹುದೆಂದು ಊಹಿಸಲಾಗಿದೆ. ವಿಶ್ರಾಂತಿ/ಕೊನೆಯ ದಿನಗಳನ್ನು ಕಳೆದ ಸ್ಥಳದ ಬಗ್ಗೆ ವಿವರಗಳಿಲ್ಲವಾದರೂ, ಅರಿಕೇಸರಿಯಿಂದ ದತ್ತವಾದ ಧರ್ಮಪುರ ಅಗ್ರಹಾರದಲ್ಲಿ ಸಮಾಧಾನದಿಂದ ಕೊನೆಯ ದಿನಗಳನ್ನು ಕಳೆದಿರಬಹುದು ಅಥವಾ ಸ್ನೇಹ-ವಿಶ್ವಾಸದ ಅರಿಕೇಸರಿಯ ರಾಜಧಾನಿ ಬೋದನದಲ್ಲಿಯೋ ವೇಮುಲವಾಡದಲ್ಲಿಯೋ ಕಾಲ ಕಳೆದಿರಬಹುದೆಂದು ಭಾವಿಸಲು ಮಾತ್ರ ಸಾಧ್ಯವಿದೆ.

ಒಟ್ಟಿನಲ್ಲಿ ೧೦ನೆಯ ಶತಮಾನದ ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಪ್ರಭಾವಗಳು ಪಂಪನ ಕೃತಿಗಳ ಮೇಲೆ ಒತ್ತಡ ಹೇರುವುದಲ್ಲದೆ, ಕೃತಿಯ ಸೌಂದರ್ಯ ಹೆಚ್ಚುವಂತೆ ಮಾಡಿವೆ. ಪಂಪನ ಕೃತಿಗಳಲ್ಲಿ ಆ ಕಾಲದ ಸಾಮಾಜಿಕ ಹಾಗೂ ಧಾರ್ಮಿಕ ಜೀವನದ ವಿವರಗಳನ್ನು ಸೂಕ್ಷ್ಮವಾಗಿ ಗುರುತಿಸಬಹುದು.