ಶುಕ್ರವಾರ, ಅಕ್ಟೋಬರ್ 14, 2011

ಕನ್ನಡ ಸಾಹಿತ್ಯದ ಸ್ವಾತಂತ್ರ್ಯ ಯುಗ (ಭಾಗ-2: ಕುಮಾರವ್ಯಾಸ, ಲಕ್ಷ್ಮೀಶ, ರತ್ನಾಕರವರ್ಣಿ ಹಾಗೂ ದಾಸಸಾಹಿತ್ಯ)

ಕುಮಾರವ್ಯಾಸ:
·         ಗದುಗಿನ ನಾರಣಪ್ಪ ಅಥವಾ ಕುಮಾರವ್ಯಾಸ ಶುದ್ಧ ಕನ್ನಡದ ಕವಿ; ಉದ್ದಾಮ ಕವಿ.
·         ಗದುಗಿನ ವೀರನಾರಾಯಣ ಸ್ವಾಮಿಯ ಅಂಕಿತದಲ್ಲಿ ಕಾವ್ಯ ಬರೆದವನು.
·         ಈತನ ಲೋಕಪ್ರಿಯ ಕಾವ್ಯ ಕರ್ಣಾಟ ಭಾರತ ಕಥಾಮಂಜರಿ ಅಥವಾ ಕುಮಾರವ್ಯಾಸ ಭಾರತ.
·         ಕನ್ನಡ ದೇಶದಲ್ಲಿ ಗದುಗಿನ ಭಾರತವನ್ನು ಓದದ ಹಳ್ಳಿಯಿಲ್ಲ; ಓದಿ ತಲೆದೂಗದ ಕನ್ನಡಿಗನಿಲ್ಲ.
·         ನಾರಣಪ್ಪನ ಭಾರತವು ನವರಸಭರಿತವಾದ ಕಾವ್ಯರತ್ನ.
·         ತಾನು ಹಲಗೆ, ಬಳಪ ಹಿಡಿದು ಬರೆದು, ಅಳಿಸಿ ಪ್ರಯಾಸದಿಂದ ಕವಿತ್ವ ರಚನೆ ಮಾಡದೆ ಒಂದೇ ಸಲ ಕಾವ್ಯವನ್ನು ರಚಿಸುವವನೆಂದು ಕುಮಾರವ್ಯಾಸನ ಹೇಳಿಕೆ. ಇದು ಜಂಭದ ಮಾತಲ್ಲ.
·         ಕುಮಾರವ್ಯಾಸನ ಕಥಾ ಸಂವಿಧಾನ, ಶೈಲಿ, ಪಾತ್ರರಚನೆ, ರೂಪಕಾದಿ ಅಲಂಕಾರಗಳು ಮೊದಲಾದ ಶ್ರೇಷ್ಠ ಅಂಶಗಳು ಆತನನ್ನು ಕನ್ನಡದ ಅಗ್ರಗಣ್ಯ ಕವಿಗಳಲ್ಲಿ ಒಬ್ಬನೆಂದು ಕರೆಯುವಂತೆ ಮಾಡಿವೆ.
·         ನಾರಣಪ್ಪ ಭಾರತದ ಮೊದಲ ೧೦ ಪರ್ವಗಳನ್ನು ಮಾತ್ರ ಬರೆದು ಸ್ವರ್ಗಸ್ಥನಾದನು. ಮಿಕ್ಕ ೮ ಪರ್ವಗಳನ್ನು ತಿಮ್ಮಣ್ಣಕವಿಯು ವಿಜಯನಗರದ ಆಶ್ರಯದಲ್ಲಿದ್ದು ಬರೆದು ಮುಗಿಸಿದನು.
ಈ ಸಂದರ್ಭದಲ್ಲಿ ಬ್ರಾಹ್ಮಣ ಧರ್ಮಕ್ಕೆ ಸಂಬಂಧಪಟ್ಟ ಹಲವು ಸಂಸ್ಕೃತ ಗ್ರಂಥಗಳು ಕನ್ನಡಕ್ಕೆ ಪರಿವರ್ತಿತವಾದುವು.
·         ಕುಮಾರ ವಾಲ್ಮೀಕಿಯು ತನ್ನ ತೊರವೆ ರಾಮಾಯಣವನ್ನು ಷಟ್ಪದಿ ಕಾವ್ಯವಾಗಿ ಬರೆದನು.
ಲಕ್ಷ್ಮೀಶ:
·         ಲಕ್ಷ್ಮೀಶನ ಬಿರುದುಗಳಲ್ಲೊಂದು ಕರ್ಣಾಟಕವಿಚೂತವನ ಚೈತ್ರ.
·         ಲಕ್ಷ್ಮೀಶನು ಜೈಮಿನಿ ಭಾರತ ಎಂಬ ಕಾವ್ಯವನ್ನು ವಾರ್ಧಕ ಷಟ್ಪದಿಯಲ್ಲಿ ರಚಿಸಿದನು.
·         ಜೈಮಿನಿ ಭಾರತವು ಲಲಿತವೂ, ಮನೋಹರವೂ ಆಗಿರುವುದರಿಂದ ಪಂಡಿತ-ಪಾಮರರಿಗೆ ಪ್ರಿಯವಾಗಿದೆ.
·         ಜೈಮಿನಿ ಭಾರತದಲ್ಲಿನ ಸೀತಾ ವನವಾಸ, ಚಂದ್ರಹಾಸನ ಚರಿತೆ ಮೊದಲಾದ ಕಥೆಗಳು ಉತ್ತಮವಾಗಿ ನಿರೂಪಿತವಾಗಿವೆ.
·         ಸೀತೆಯು ಅರಿಯದೆ ಕಾಡಿಗೆ ಹೋಗಿ ಅಲ್ಲಿ ಲಕ್ಷ್ಮಣನ ಬಾಯಿಂದ ತನ್ನ ಪತಿಯ ಆಜ್ಞೆಯನ್ನು ಕೇಳಿದಾಗ ಅವಳು ಆಡುವ ಮಾತು ಕಲ್ಲೆದೆಯನ್ನೂ ಕರಗಿಸುತ್ತದೆ.
·         ಮನ ಕರಗುವ ದೃಶ್ಯಗಳನ್ನು ವರ್ಣಿಸುವುದರಲ್ಲಿ ಮಾತ್ರವಲ್ಲ, ಚಮತ್ಕಾರವಾಗಿ ಶ್ಲೇಷೆಯನ್ನು ತರುವುದರಲ್ಲಿಯೂ, ಕಿವಿಗೆ ಇಂಪಾಗುವಂತೆ ಪದಗಳನ್ನು ಜೋಡಿಸುವುದರಲ್ಲಿಯೂ ಲಕ್ಷ್ಮೀಶ ನಿಪುಣ. ಆದ್ದರಿಂದಲೇ ಲಕ್ಷ್ಮೀಶನಿಂಚರದಿಂಪು ಎಂಬ ಮಾತು ಪ್ರಸಿದ್ಧವಾಗಿದೆ.
ರತ್ನಾಕರವರ್ಣಿ:
ಈತ ಸುಮಾರು ಕ್ರಿ..1557ರ ಸಮಯದಲ್ಲಿ ಗ್ರಂಥರಚನೆ ಮಾಡುತ್ತಿದ್ದನು.
ಈತ ಈಗಿನ ಮೂಡಬಿದರೆಯಲ್ಲಿದ್ದನೆಂದು ತಿಳಿದುಬಂದಿದೆ.
ಈತನ ರಚನೆಗಳಲ್ಲಿ ಭರತೇಶ ವೈಭವ ಮುಖ್ಯವಾದದ್ದು.
ಭರತೇಶ ವೈಭವ 80 ಸಂಧಿಗಳಿಂದ ಕೂಡಿರುವ ದೊಡ್ಡ ಸಾಂಗತ್ಯ ಗ್ರಂಥ.
ಭರತೇಶ ವೈಭವದಲ್ಲಿ ಪ್ರಥಮ ತೀರ್ಥಂಕರನಾದ ಪುರುಪರಮೇಶ್ವರನ ಹಿರಿಯ ಕುಮಾರ ಭರತನು ಗಣನೆಯಿಲ್ಲದ ರಾಜ್ಯಸುಖದೊಳೋಲಾಡಿ ಧಾರಿಣಿ ಮೆಚ್ಚಿ ಜನಯೋಗಿಯಾಗಿ ಕ್ಷಣಕೆ ಕರ್ಮವ ಸುಟ್ಟು ಜಿನನಾದ ವೈಭವವನ್ನು ಹೇಳಲಾಗಿದೆ.
ವಿಸ್ತಾರವಾದ ಕಾವ್ಯದಲ್ಲಿ ಚಿತ್ರವಿಚಿತ್ರ ಕಥಾಸರಣಿಯಿದೆ; ನೂತನ ಬಗೆಯ ವರ್ಣನೆಯಿದೆ; ನವರಸ ಪುಷ್ಟಿಯಿದೆ; ತತ್ವವೂ ಇದೆ.
ಕವಿಯ ಅನೇಕ ವಾಕ್ಯಗಳು ಗಾದೆಗಳಂತೆ ಅರ್ಥಗರ್ಭಿತವಾಗಿವೆ.
ಸುಲಭವೂ, ಸರಳವೂ ಆದ ಶೈಲಿಯಲ್ಲಿರುವುದರಿಂದ ಸಾಮಾನ್ಯರೂ ಓದಿ ಆನಂದಿಸಬಹುದಾಗಿದೆ.
ದಾಸ ಸಾಹಿತ್ಯ:
·         ಸುಮಾರು 16ನೆಯ ಶತಮಾನದ ವೇಳೆಗೆ ಕನ್ನಡದಲ್ಲಿ ಹಲವಾರು ವೈಷ್ಣವದಾಸರು ಹಾಡುಗಳನ್ನು ರಚಿಸಿದ್ದರು.
·         ವೀರಶೈವ ವಚನ ಸಾಹಿತ್ಯದಂತೆಯೇ ಹಾಡುಗಳೂ ಭಕ್ತಿಪಂಥದ ತತ್ವ, ನೀತಿಗಳ ಪ್ರಚಾರಕ್ಕಾಗಿಯೇ ಹುಟ್ಟಿದುವು.
·         ವೀರಶೈವರು ಶಿವಪಾರಮ್ಯ ಹೇಳಿದರೆ, ವೈಷ್ಣವರು ವಿಷ್ಣುವನ್ನು ಸ್ತುತಿಸಿದರು.
·         ವೀರಶೈವರದು ವಚನ, ದಾಸರದು ಕೀರ್ತನೆ ಅಥವಾ ದೇವರನಾಮ.
·         ಪುರಂದರದಾಸ, ವಿಜಯದಾಸ, ಕನಕದಾಸ ಮೊದಲಾದ ದಾಸಶ್ರೇಷ್ಠರು ಕೀರ್ತನೆಗಳನ್ನು ಬರೆದು ಹಾಡಿದ್ದಾರೆ.
·         ನಂಬಿ ಭಜಿಸಿದವರಿಗೆ ದೇವರು ತಪ್ಪದೆ ಒಲಿಯುವನು ಎಂಬುದು ಎಲ್ಲ ಭಕ್ತಿಪಂಥಗಳ ತತ್ವ. ಇಂತಹ ದೃಢಭಕ್ತಿ ಲಭಿಸಲು ಸಾಧನೆ ಮಾಡಬೇಕು, ಶುದ್ಧ ಚರಿತ್ರರಾಗಬೇಕು, ವಿಶ್ವಪ್ರೇಮವನ್ನು ಅಭ್ಯಾಸ ಮಾಡಬೇಕು ಹಾಗೂ ಧರ್ಮಾಚರಣೆಯಲ್ಲಿ ತೊಡಗಬೇಕು.
·         ವೈರಾಗ್ಯವನ್ನು ಉಪದೇಶಿಸಿದ್ದರಿಂದ ದಾಸರು ಇಹಲೋಕ ನಿರಸನವನ್ನು ಮಾಡಿ ಜನರಿಗೆ ನಿರುತ್ಸಾಹವನ್ನು ಉಂಟು ಮಾಡಿದರೆಂಬ ಅಪಕೀರ್ತಿ ಅವರಿಗೆ ಬಂದಿದೆ. ಆದರೆ ದಾಸರು ಇಹಜೀವನವನ್ನು ತಿರಸ್ಕರಿಸಲಿಲ್ಲ. ಇಹಲೋಕ ಸುಖವೇ ಪರಮಾರ್ಥವೆಂದು ನೆಚ್ಚಿ ಕೆಡಬಾರದು ಎಂಬುದಾಗಿ ದಾಸರು ಹೇಳಿದ್ದಾರೆ.
·         ಸಂಸಾರದ ಕಷ್ಟ ಕಾರ್ಪಣ್ಯಗಳಿಗೆ ಹೆದರಿ ಸಂನ್ಯಾಸಿಯಾಗಲೆಳಸುವುದು ಹೆಡ್ಡತನ ಎಂದು ಕೀರ್ತನೆಗಳಲ್ಲಿ ಹೇಳಲಾಗಿದೆ.
·         ತ್ರಿಕರಣ ಶುದ್ಧಿಯಿಂದ ಸದಾಚಾರಿಗಳಾಗಬೇಕೇ ಹೊರತು ಬಾಹ್ಯಾಡಂಬರದಿಂದ ಲಾಭವಿಲ್ಲ ಎಂದು ಕೆಲವು ಕೀರ್ತನೆಗಳಲ್ಲಿ ವ್ಯಕ್ತವಾಗಿದೆ.
·         ದಾಸರ ಕೀರ್ತನೆಗಳು ಪುರಾಣೇತಿಹಾಸಗಳಿಂದ ಆರಿಸಿಕೊಂಡ ದೃಷ್ಟಾಂತಗಳಿಂದ ತುಂಬಿವೆ.
·         ಹಾಡುವುದಕ್ಕೆ ಯೋಗ್ಯವಾದ ಭಾಷೆ, ಸುಂದರ ಉಪಮಾನಗಳು, ಜೀವನವಿಮರ್ಶೆ ಮುಂತಾದುವು ಹಾಡುಗಳಿಗೆ ಕಾವ್ಯತ್ವವನ್ನುಂಟು ಮಾಡಿವೆ.

1 ಕಾಮೆಂಟ್‌: