ಮಂಗಳವಾರ, ಫೆಬ್ರವರಿ 22, 2011

ಪಂಪನ ಯುಗ (ಭಾಗ-೩: ನಾಗಚಂದ್ರ, ನೇಮಿಚಂದ್ರ, ಆಂಡಯ್ಯ, ಜನ್ನ)

ನಾಗಚಂದ್ರ:
·         12ನೆಯ ಶತಮಾನದ ಆದಿಭಾಗದಲ್ಲಿ ನಾಗಚಂದ್ರನು ರಾಮಚಂದ್ರ ಚರಿತ ಪುರಾಣ ಮತ್ತು ಮಲ್ಲಿನಾಥಪುರಾಣ ಎಂಬ ದೊಡ್ಡ ಕಾವ್ಯಗಳನ್ನು ಬರೆದನು.
·         ವಿಜಯಪುರ ಎಂಬ ಊರಿನಲ್ಲಿ ಮಲ್ಲಿನಾಥ ಜಿನಾಲಯವನ್ನು ಕಟ್ಟಿಸಿದುದಲ್ಲದೆ, ಅದೇ ಜಿನನ ಚರಿತ್ರೆಯನ್ನು ಮಲ್ಲಿನಾಥಪುರಾಣ ಎಂಬ ಹೆಸರಿನಲ್ಲಿ ರಚಿಸಿದನು.
·         ತಾನೂ ಪಂಪನಂತೆಯೇ ಲಲಿತವಾದ ಶೈಲಿಯಲ್ಲಿ ಕಾವ್ಯ ಬರೆದನೆಂಬ ಅಭಿಮಾನದಿಂದ ಅಭಿನವಪಂಪ ಎಂಬ ಕಾವ್ಯನಾಮವನ್ನು ಇಟ್ಟುಕೊಂಡಿದ್ದಾನೆ. ಆದ್ದರಿಂದಲೇ ಈತ ಬರೆದ ರಾಮಚಂದ್ರ ಚರಿತ ಪುರಾಣವನ್ನು ಪಂಪರಾಮಾಯಣ ಎಂದೂ ಕರೆಯಲಾಗಿದೆ.
·         ಪಂಪರಾಮಾಯಣವು ಜೈನ ರಾಮಾಯಣ.
ವಾಲ್ಮೀಕಿ ರಾಮಾಯಣಕ್ಕೂ ನಾಗಚಂದ್ರನ ರಾಮಾಯಣಕ್ಕೂ ಹಲವಾರು ವ್ಯತ್ಯಾಸಗಳಿವೆ.
·         ಪಂಪರಾಮಾಯಣದಲ್ಲಿ ದಶರಥನ ಪುತ್ರಕಾಮೇಷ್ಟಿ ಮೊದಲಾದ ಯಜ್ಞಗಳ ಪ್ರಸ್ತಾಪವಾಗಲಿ, ವಿಶ್ವಾಮಿತ್ರ, ವಾಲ್ಮೀಕಿ, ವಸಿಷ್ಠ ಮೊದಲಾದ ಋಷಿಗಳ ಪ್ರಸ್ತಾಪವಾಗಲಿ ಇಲ್ಲ.
·         ಇಲ್ಲಿನ ಹನುಮಂತ ವಿಮಾನದಲ್ಲಿ ಕುಳಿತು ಸಮುದ್ರ ದಾಟುವನೇ ಹೊರತು ಹಾರುವುದಿಲ್ಲ.
·         ರಾವಣನನ್ನು ಕೊಲ್ಲುವವನು ಲಕ್ಷ್ಮಣ, ರಾಮನಲ್ಲ.
·         ಈ ರಾಮಾಯಣದಲ್ಲಿ ವಾಲಿಯು ವೈರಾಗ್ಯದಿಂದ ಸಂನ್ಯಾಸಿ ಆಗಿರುವನು.
·         ವಾಲಿ ರಾಮನಿಂದ ಹತನಾಗುವ ಪ್ರಸಂಗವೇ ಇಲ್ಲ.
·         ಸುಗ್ರೀವನಿಗೆ ಹಿಂಸೆ ಕೊಟ್ಟವನು ಮಾಯಾಸುಗ್ರೀವನೇ ಹೊರತು ವಾಲಿಯಲ್ಲ.
·         ಜನಸ್ಥಾನದಲ್ಲಿ ಸೀತೆಯು ಲಕ್ಷ್ಮಣನನ್ನು ನಿಂದಿಸುವ ಪ್ರಸಂಗವೂ ಇದರಲ್ಲಿಲ್ಲ.
·         ಎಲ್ಲ ವ್ಯತ್ಯಾಸಗಳಿಗೂ ಮುಖ್ಯವಾದದ್ದೆಂದರೆ ರಾವಣನ ಪಾತ್ರರಚನೆ. ನಾಗಚಂದ್ರನ ರಾವಣ ಬಹಳ ಯೋಗ್ಯ, ಧರ್ಮಪರ. ನಳಕೂಬರನ ರಾಜಧಾನಿ ದುರ್ಲಂಘ್ಯಪುರವನ್ನು ರಾವಣನು ಮುತ್ತಿದಾಗ ಅವನಲ್ಲಿ ಬಹು ಕಾಲದಿಂದ ಮೋಹಗೊಂಡಿದ್ದ ನಳಕೂಬರನ ಹೆಂಡತಿಯು ಅವನಲ್ಲಿಗೆ ದೂತಿಯನ್ನು ಕಳುಹಿಸುತ್ತಾಳೆ. ರಾವಣನು ಪುರ ಪ್ರವೇಶಕ್ಕೆ ಅವಳಿಂದ ಅವಕಾಶವನ್ನು ಕಲ್ಪಿಸಿಕೊಂಡರೂ ಅವಳಲ್ಲಿ ಕಾಮಪರವಶನಾಗದೆ,
ರಹಸ್ಯದಿಂದಾಕೆಯಂ ಕರೆದು, ನೀನ್ ವಿಶುದ್ಧಕುಲದ ಕುಶಧ್ವ
ಜಂಗಂ ಮಧುಕಾಂತೆಗಂ ಪುಟ್ಟಿದುದರಿಂ ನಿಜಕುಲಾಚಾರಮಂ
ಬಗೆದು ಶೀಲಪರಿಪಾಲನಮಂ ಮಾಳ್ಪುದು, ಅಂತಲ್ಲದೆಯುಂ
ನೀನೆನಗೆ ವಿದ್ಯೋಪದೇಶಂಗೆಯ್ದುದರಿಂ ಗುರುವಾದೆ, ಪೆರ
ತೇನುಮಂ ಬಗೆಯದೆ ನಳಕೂಬರನೊಳ್ ಕೂಡಿ ಸುಖಮಿರು
ಎಂದು ಆಕೆಗೆ ಧರ್ಮೋಪದೇಶ ಮಾಡಿ ನಳಕೂಬರನಲ್ಲಿಗೆ ಕಳುಹಿಸಿ ಅವನ ರಾಜ್ಯವನ್ನು ಹಿಂತಿರುಗಿ ಕೊಟ್ಟುಬಿಡುತ್ತಾನೆ.
·         ಜಿತೇಂದ್ರಿಯ ರಾವಣನು ಬರಸಿಡಿಲ ಬಳಿವಿಡಿದು ಪೊಳೆವ ಕುಡು ಮಿಂಚಿನಂತೆ ಬಲಭದ್ರನ ಕೆಲದೊಳಿರ್ದ ಸೀತೆಯಂ ಕಂಡು ಚಂಚಲಗೊಳ್ಳುವನು. ತನ್ನ ಪರಾಂಗನಾವಿರತಿ ವ್ರತವನ್ನು ಮರೆಯುವನು.
ಬಲೆ ದೃಷ್ಟಿಗೆ ವಜ್ರದ ಸಂ
ಕಲೆ ಹೃದಯಕ್ಕೆನಿಪ ರೂಪವತಿ ಜಾನಕಿ ಕ
ನ್ಬೊಲದೊಳಿರೆ ಪದ್ಮಪತ್ರದ
ಜಲಬಿಂದುವಿನಂತೆ ಚಲಿತಮಾದುದು ಚಿತ್ತಂ ||
·         ದುರ್ಮೋಹದಿಂದ ರಾವಣನು ಆಪ್ತರ ಹಿತೋಕ್ತಿಗಳನ್ನು ಅಲ್ಲಗಳೆದು ಸೀತೆಯನ್ನು ಅಪಹರಿಸಿ ಲಂಕೆಯಲ್ಲಿ ಸೆರೆಯಲ್ಲಿಡುವನು. ಆದರೆ ಸೀತೆ ಅವನಿಗೆ ಒಲಿಯಲಿಲ್ಲ. ರಾವಣ ಸೀತೆಯನ್ನು ಹೆದರಿಸುತ್ತಾ ಇಗೋ ಬಹುರೂಪಿಣೀ ವಿದ್ಯೆಯು ನನಗೆ ವಶವಾಯಿತು. ಇನ್ನು ನನ್ನನ್ನು ಪ್ರತಿಭಟಿಸಬಲ್ಲ ಶತ್ರುಪಕ್ಷವಿಲ್ಲ. ನಿನ್ನ ನೆಚ್ಚಿನ ರಾಮನ ಯೋಚನೆಯನ್ನು ಬಿಡು ಎನ್ನುವನು. ಭಯಗೊಂಡ ಸೀತೆಯು ರಾಮನ ಪ್ರಾಣಾಪಹರಣ ಮಾತ್ರ ಮಾಡಬೇಡ ಎಂದು ಪ್ರಾರ್ಥಿಸುತ್ತಾ ಮೂರ್ಛೆ ಬೀಳುವಳು. ಇದನ್ನು ಕಂಡ ರಾವಣ ತನ್ನ ಕ್ರೂರ ಕರ್ಮಕ್ಕೆ ಪಶ್ಚಾತ್ತಾಪಪಡುವನು. ಸೀತೆಯ ವಿಷಯದಲ್ಲಿ ದಯೆಯು ಅಂಕುರಿಸಿ ದುಃಖಿಸುವನು. ದುರ್ದೈವದಿಂದ ಅವನ ದುರಭಿಮಾನವೇ ಪ್ರಬಲವಾಗಿ ರಾಮನನ್ನು ಸೆರೆಹಿಡಿದು ತಂದು ಅವನಿಗೆ ಸೀತೆಯನ್ನೊಪ್ಪಿಸಬೇಕೇ ಹೊರತು ಈಗಲೇ ಸೀತೆಯನ್ನು ಅವನ ಬಳಿಗೆ ಕಳುಹಿಸಬಾರದೆಂದು ನಿಶ್ಚಯಿಸುವನು. ಆದರೆ ಈ ನಿಶ್ಚಯವನ್ನು ಸಾಧಿಸುವುದಕ್ಕಾಗದೆ ಅವನು ಯುದ್ಧಭೂಮಿಯಲ್ಲಿ ಸಾಯುವನು. ಈ ದುರಂತರಾವಣನ ಚಿತ್ರವು ಪಂಪರಾಮಾಯಣಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ಉಂಟುಮಾಡಿದೆ.
ಚಂಪೂಯುಗದಲ್ಲಿ ಹುಟ್ಟಿದ ಅನೇಕ ಗ್ರಂಥಗಳು ಮತಪ್ರಚಾರಕ್ಕೆಂದು ರಚನೆಗೊಂಡವು. ಜೈನ ತೀರ್ಥಂಕರ ಚರಿತ್ರೆಗಳೆಲ್ಲವೂ ಜೈನಧರ್ಮ ಪ್ರಚಾರಕ್ಕಾಗಿಯೇ ಹೊರತು ಬೇರೆಯಲ್ಲ. ಕಾವ್ಯರಚನೆಯನ್ನೇ ಪರಮೋದ್ದೇಶವಾಗಿ ಪಡೆದಿದ್ದಂತಹ ಕವಿಗಳು ಕಡಿಮೆ.
ಸುಮಾರು ಕ್ರಿ.ಶ.೧೧೭೦ರಲ್ಲಿದ್ದ ನೇಮಿಚಂದ್ರ, ೧೨೩೫ರ ವೇಳೆಗಿದ್ದ ಆಂಡಯ್ಯ ಎಂಬ ಕವಿಗಳು ಬಲುಮಟ್ಟಿಗೆ ಮತಪ್ರಚಾರದ ಉದ್ದೇಶವಿಲ್ಲದ ಕಾವ್ಯಗಳನ್ನು ರಚಿಸಿದ್ದಾರೆ.
ನೇಮಿಚಂದ್ರ:
·         ನೇಮಿಚಂದ್ರ ಲೀಲಾವತೀ ಪ್ರಬಂಧ ಎಂಬ ಚಂಪೂಕಾವ್ಯವನ್ನು ಬರೆದಿದ್ದಾನೆ.
·         ಲೀಲಾವತಿ ಸಂಬಂಧುವಿನ ವಾಸವದತ್ತದ ಕತೆಯನ್ನು ಅನುಸರಿಸುತ್ತದೆ.
·         ಲೀಲಾವತಿ ಪ್ರಬಂಧದಲ್ಲಿ ಜೈನಮತದ ಆವರಣವೂ ಇದೆ.
·         ಕದಂಬರ ರಾಜಧಾನಿಯಾದ ಜಯಂತೀಪುರ ಅಥವಾ ಬನವಾಸಿ ಪಟ್ಟಣದಲ್ಲಿ ಚೂಡಾಮಣಿ ಎಂಬ ರಾಜನಿದ್ದನು. ಈತನ ಮಹಿಷಿ ಪದ್ಮಾವತಿ. ಇವರಿಬ್ಬರ ಮಗ ಕಂದರ್ಪದೇವ. ಗುಣಗಂಧನೆಂಬ ಮಂತ್ರಿಯ ಮಗನಾದ ಮಕರಂದನು ಇವನ ಪ್ರಿಯಮಿತ್ರ. ಕಂದರ್ಪನು ಯುವರಾಜ ಪಟ್ಟವನ್ನು ಹೊಂದಿ ಒಂದು ರಾತ್ರಿ ಕನಸಿನಲ್ಲಿ ಒಬ್ಬ ಸ್ತ್ರೀಯನ್ನು ಕಂಡು ಮರುದಿನ ಆ ಸ್ತ್ರೀ ಇರುವ ದಿಕ್ಕಿಗೆ ಮಕರಂದನೊಡನೆ ಪ್ರಯಾಣ ಮಾಡುತ್ತಾನೆ. ಕುಸುಮಪುರ ಎಂಬ ಪಟ್ಟಣದ ದೊರೆ ಶೃಂಗಾರಶೇಖರನ ಮಗಳಾದ ಲೀಲಾವತಿಯನ್ನೇ ಈತನು ಸ್ವಪ್ನದಲ್ಲಿ ಕಂಡುದು. ಆಕೆಯೂ ಇವನನ್ನು ಸ್ವಪ್ನದಲ್ಲಿ ಕಂಡು ಇವನನ್ನು ಹುಡುಕಲು ಜನರನ್ನು ಕಳುಹಿಸುತ್ತಾಳೆ. ಬಳಿಕ ಇವರಿಬ್ಬರಿಗೂ ವಿವಾಹವಾಗಿ ಕಂದರ್ಪನು ಲೀಲಾವತಿಯನ್ನು ಕರೆದುಕೊಂಡು ಜಯಂತೀಪುರಕ್ಕೆ ಬಂದು ಸುಖವಾಗಿ ರಾಜ್ಯಭಾರ ಮಾಡುತ್ತಾನೆ. ಇದು ಲೀಲಾವತಿಯ ಕಥೆ.
·         ಈ ಗ್ರಂಥದಲ್ಲಿ ಶೃಂಗಾರಪರವಾದ ವರ್ಣನೆಗಳಿಗೆ ಹೆಚ್ಚು ಪ್ರಾಶಸ್ತ್ಯ.
ಆಂಡಯ್ಯ:
·         ಸಂಸ್ಕೃತದ ಸಹಾಯವಿಲ್ಲದೆ ಕನ್ನಡದಲ್ಲಿ ಕಾವ್ಯವನ್ನು ರಚಿಸುವುದು ಅಸಾಧ್ಯ ಎಂಬ ಕಾರಣದಿಂದಲೇ ಪಂಪ, ರನ್ನ ಮೊದಲಾದ ಕವಿಗಳು ಮಿಶ್ರಭಾಷೆಯಲ್ಲಿ ಬರೆದರೆಂಬ ಆಕ್ಷೇಪಣೆಯನ್ನು ಸುಳ್ಳು ಮಾಡಲು ಆಂಡಯ್ಯ ಕಬ್ಬಿಗರ ಕಾವ ಕೃತಿಯನ್ನು ರಚಿಸಿದನೆಂಬ ವಾದವಿದೆ.
·         ಕಬ್ಬಿಗರ ಕಾವ ಕಾವ್ಯದಲ್ಲಿ ಸಂಸ್ಕೃತ ಪದಗಳ ಮಿಶ್ರಣವಿಲ್ಲ. ದೇಶ್ಯ ಪದ ತದ್ಭವ ಪದಗಳಿಂದಲೇ ರಚಿತವಾಗಿದೆ.
·         ಈ ಕಾವ್ಯಕ್ಕೆ ಕಾವನಗೆಲ್ಲ, ಸೊಬಗಿನ ಸುಗ್ಗಿ ಎಂಬ ಹೆಸರುಗಳೂ ಇವೆ.
·         ಈ ಕಾವ್ಯದ ಕಥೆ ಮನ್ಮಥ ವಿಜಯ.
·         ಈ ಕಾವ್ಯ ಚಿಕ್ಕದಾದರೂ ವಿಷಯ ಮಹತ್ತರವಾದುದು.
ಧಾರ್ಮಿಕ ಗ್ರಂಥಗಳ ಜೊತೆಗೆ ಹಲವು ಶಾಸ್ತ್ರ ಗ್ರಂಥಗಳೂ ಈ ಕಾಲದಲ್ಲಿ ಹುಟ್ಟಿದುವು. ಕೇವಲ ಭಾಷಾ ವ್ಯುತ್ಪತ್ತಿಗೆ ಸಾಧಕಗಳಾದ ವ್ಯಾಕರಣ, ಛಂದಸ್ಸು, ಅಲಂಕಾರ ಶಾಸ್ತ್ರಗಳನ್ನು ನಿರೂಪಿಸುವ ಗ್ರಂಥಗಳೇ ಅಲ್ಲದೆ ವೈದ್ಯ, ಗಣಿತ, ಜ್ಯೋತಿಷ ಮೊದಲಾದ ಶಾಸ್ತ್ರಗಳಿಗೆ ಸಂಬಂಧಪಟ್ಟ ಹಲವು ಗ್ರಂಥಗಳೂ ಹುಟ್ಟಿದವು.
ಈ ಕಾಲದ ಪ್ರಧಾನ ಲಕ್ಷಣಗಳಲ್ಲೊಂದು ಅನ್ಯಮತ ಸಹನೆ. ೧೦-೧೧ನೆಯ ಶತಮಾನಗಳಲ್ಲಿ ರಚಿತವಾದ ಪುರಾಣಗಳಲ್ಲಿ ಅನ್ಯಮತ ದೂಷಣೆ ಕಾಣಿಸುವುದಿಲ್ಲ. ೧೨ನೆಯ ಶತಮಾನದ ವೇಳೆಗೆ ಪರಧರ್ಮಗಳ ಕೆಲವು ಪದ್ಧತಿಗಳನ್ನು ಆಗಾಗ ಅಪಹಾಸ್ಯ ಮಾಡುವುದನ್ನು ಕಾಣಬಹುದು.
·         ನಯಸೇನ ತನ್ನ ಧರ್ಮಾಮೃತ ಕೃತಿಯನ್ನು ಸ್ವಮತ ಪ್ರಚಾರಕ್ಕಾಗಿ ಬರೆದರೂ, ಅದು ಅನ್ಯಮತ ದೂಷಣೆಯಿಂದ ದೂರವಾಗಿಲ್ಲ.
·         ಸಮಯಪರೀಕ್ಷೆಯನ್ನು ಬರೆದ ಬ್ರಹ್ಮಶಿವನಿಗೂ ಧರ್ಮಪರೀಕ್ಷೆಯನ್ನು ಬರೆದ ವೃತ್ತವಿಲಾಸನಿಗೂ ಇತರ ಮತಗಳನ್ನು ಅಪಹಾಸ್ಯ ಮಾಡುವುದೇ ಪ್ರಧಾನ ಉದ್ದೇಶವಾಗಿದ್ದಂತೆ ತೋರುತ್ತದೆ.
ಜನ್ನ:
·         ಸುಮಾರು ೧೧೭೦ರಿಂದ ೧೨೩೫ರ ಮಧ್ಯಕಾಲದಲ್ಲಿ ಜನ್ನ ಕನ್ನಡದಲ್ಲಿ ಗ್ರಂಥ ರಚಿಸಿದನು.
·         ಜನ್ನ ಹೊಯ್ಸಳ ವಂಶದ ವೀರಬಲ್ಲಾಳ (ಗಿರಿದುರ್ಗಮಲ್ಲ) ಮತ್ತು ಅವನ ಮಗ ನರಸಿಂಹನ ಆಸ್ಥಾನ ಕವಿಯಾಗಿದ್ದನು.
·         ಜನ್ನನಿಗೆ ಕವಿಚಕ್ರವರ್ತಿ ಎಂಬ ಬಿರುದಿದೆ.
·         ಈತನನ್ನು ಮಧುರ, ಕಮಲಭವ, ಆಂಡಯ್ಯ ಮೊದಲಾದ ಹಲವು ಕವಿಗಳು ಹೊಗಳಿದ್ದಾರೆ.
·         ಪಂಪನಂತೆಯೇ ಜನ್ನನೂ ಕವಿ ಮಾತ್ರನಾಗಿರದೆ ಯುದ್ಧವೀರನೂ ಆಗಿದ್ದನೆಂದು ತಿಳಿಯುತ್ತದೆ.
·         ಇವನು ನಾಳ್ಪ್ರಭುವಾಗಿದ್ದನು.
·         ಜನ್ನನು ಯಶೋಧರ ಚರಿತ್ರೆ, ಅನಂತನಾಥ ಪುರಾಣ ಎಂಬ ಎರಡು ಕಾವ್ಯಗಳನ್ನು ರಚಿಸಿದ್ದಾನೆ.
·         ಯಶೋಧರ ಚರಿತೆ ಯಾವ ತೀರ್ಥಂಕರನ ಚರಿತ್ರೆಯನ್ನು ಹೇಳದಿದ್ದರೂ ನಾಲ್ಕು ಪುರಾಣಗಳಿಂದ ಆಗದ ಧರ್ಮಪ್ರಚಾರವು ಇದೊಂದರಿಂದ ಆಗಿದೆ ಎಂದು ಹೇಳಬಹುದು.
·         ತೀರ್ಥಂಕರ ಚರಿತೆಗಳಲ್ಲಿ ಇರುವಂತೆ ಯಶೋಧರ ಚರಿತೆಯಲ್ಲಿ ಉದ್ದವಾದ ಜನ್ಮಾಂತರ ಕತೆಗಳಿಲ್ಲ. ಇರುವ ಅಲ್ಪ ಸ್ವಲ್ಪ ಜನ್ಮಾಂತರ ಕತೆಯೂ ಕಥಾಭಾಗದಲ್ಲಿ ಬಹಳ ಚೆನ್ನಾಗಿ ಹೊಂದಿಕೊಂಡಿದೆ.
·         ತೀರ್ಥಂಕರ ಚರಿತ್ರೆಯನ್ನು ಬರೆಯುವಾಗ ಕವಿಗಿರುವ ಕೆಲವು ನಿರ್ಬಂಧಗಳು ಇಂಥ ಗ್ರಂಥಗಳನ್ನು ಬರೆಯುವಾಗ ಇರುವುದಿಲ್ಲ. ಹಾಗಾಗಿ ಕವಿಗೆ ಇಲ್ಲಿ ಹೆಚ್ಚು ಸ್ವಾತಂತ್ರ್ಯ ಇರುತ್ತದೆ. ಕವಿಯು ತನ್ನ ರಸಜ್ಞತೆಯನ್ನು, ಕಥನಕೌಶಲವನ್ನು ಚೆನ್ನಾಗಿ ವ್ಯಕ್ತಪಡಿಸಬಹುದು.
·         ಅಭಯರುಚಿ ಕುಮಾರಂ ಮಾರಿದತ್ತಂಗೆ ಹಿಂಸಾರಭಸಮತಿಗೆ ಸೈಪಂ ಪೇಳ್ದು ಧರ್ಮಕ್ಕೆ ತಂದುದು ಈ ಕಾವ್ಯದ ವಸ್ತು.
·         ಕವಿಯ ಅಭಿಪ್ರಾಯದಂತೆ ಇದು ವ್ರತನಿಷ್ಠರಾದ ಶ್ರಾವಕರು ಪುಣ್ಯದಿನದಲ್ಲಿ ಪಾರಣೆಯಾದ ಮೇಲೆ ಕೇಳಿ ಸಂತೋಷಪಡುವುದಕ್ಕೆ ಯೋಗ್ಯವಾದ ಕತೆ. ಅಂಥ ವೇಳೆಯಲ್ಲಿ ಜನ ಧರ್ಮ ಪ್ರಬೋಧಕವಾದ ಕತೆಗಳನ್ನು ಕೇಳುವುದಕ್ಕೆ ಆಸೆಪಡುವರೆಂದು ಜನ್ನನಿಗೆ ತಿಳಿದಿತ್ತು. ಜೈನಧರ್ಮ ಪ್ರಚಾರ ಜನ್ನನ ಆಶಯಗಳಲ್ಲಿ ಪ್ರಧಾನವಾಗಿತ್ತೆಂದು ತಿಳಿಯಬಹುದು.
·         ಒಂದು ಹಿಟ್ಟಿನ ಕೋಳಿಯನ್ನು ಬಲಿಕೊಟ್ಟ ವಧೆಯ ಸಂಕಲ್ಪ ಮಾತ್ರದಿಂದ ಆದ ದುಃಖ ಪರಂಪರೆಗಳನ್ನು ಚಿತ್ರಿಸಿ ಜನ್ನ ಅಹಿಂಸೆಯ ಶ್ರೇಷ್ಠತೆಯನ್ನು ಸೂಚಿಸಿದ್ದಾನೆ.
·         ಕವಿಯು ಪಾತ್ರಪೋಷಣೆಯನ್ನಾಗಲಿ, ವರ್ಣನೆಯನ್ನಾಗಲಿ ಅಲಕ್ಷ್ಯ ಮಾಡಿಲ್ಲ. ಯಶೋಧರ, ಚಂದ್ರಮತಿ ಮುಂತಾದ ಪಾತ್ರಗಳನ್ನು ಜನ್ನ ಪೋಷಿಸಿರುವ ರೀತಿ ಬಹಳ ಹಿತವಾಗಿದೆ.
·         ಜನ್ನನ ವರ್ಣನಾಕುಶಲತೆ, ಕಥೆ ಹೇಳುವ ನೈಪುಣ್ಯ, ಪಾತ್ರರಚನೆ ಇವು ಅವನ ಕವಿಚಕ್ರವರ್ತಿ ಬಿರುದಿಗೆ ಸಾರ್ಥಕ್ಯ ಕಲ್ಪಿಸುತ್ತವೆ.
ಈ ಕಾಲದ ಸಾಹಿತ್ಯ ಕೇವಲ ರಾಜಾಸ್ಥಾನದಲ್ಲಿಯೇ ನೆಲೆಸಿತ್ತು. ಅದು ಸಾಮಾನ್ಯ ಜನರನ್ನು ಸೇರಿದಂತೆ ಕಾಣುವುದಿಲ್ಲ. ಗ್ರಂಥ ರಚನೆ ಮಾಡಿದವರಲ್ಲಿ ಕೆಲವರು ಸ್ವಯಂ ರಾಜರು, ಕೆಲವರು ದಂಡನಾಯಕರು ಅಥವಾ ಮಂತ್ರಿಗಳು. ಉಳಿದವರು ಅವರ ಆಶ್ರಿತ ಕವಿಗಳು.
ಈ ಕಾಲದ ಹಲವು ಗ್ರಂಥಗಳು ಸಂಸ್ಕೃತ ಗ್ರಂಥಗಳ ಕನ್ನಡ ಅನುವಾದಗಳಾಗಿವೆ. ಮಿಕ್ಕವುಗಳ ವಸ್ತು ಬಹುಮಟ್ಟಿಗೆ ಸಂಸ್ಕೃತ ಗ್ರಂಥಗಳಿಂದ ಆರಿಸಿಕೊಂಡದ್ದು. ವಿಷಯವು ಹೇಗೆ ಸಂಸ್ಕೃತದ್ದೋ ಹೇಳುವ ರೀತಿಯೂ ಹಾಗೇ ಸಂಸ್ಕೃತದ್ದು.
ಸಂಸ್ಕೃತ ಛಂದಸ್ಸೇ ಈ ಕಾಲದ ಕವಿಗಳಿಗೆ ಮೆಚ್ಚುಗೆಯಾಯಿತು. ರಗಳೆಯನ್ನು ಅಲ್ಲಲ್ಲಿ ಉಪಯೋಗಿಸಿದ್ದಾರೆ. ಕನ್ನಡ ಛಂದಸ್ಸಿನಲ್ಲಿಯೇ ಗ್ರಂಥ ಬರೆಯಲು ಯಾವ ಕವಿಯೂ ಯತ್ನಿಸಿದಂತೆ ತೋರುವುದಿಲ್ಲ.
ಭಾಷೆ ಸಂಸ್ಕೃತ ಸಮ್ಮಿಶ್ರ ಕನ್ನಡ. ಅನೇಕ ವೇಳೆ ಕನ್ನಡ ಪದ್ಯಗಳನ್ನು ಬರೆಯಬೇಕೆಂಬುದನ್ನು ಮರೆತು ಕವಿಗಳು ಸಂಸ್ಕೃತ ಶ್ಲೋಕಗಳನ್ನೇ ಬರೆದು ಬಿಡುವುದೂ ಉಂಟು.
ಭಾಷೆ, ವಸ್ತು, ಛಂದಸ್ಸು ಎಲ್ಲ ಭಾಗಗಳಲ್ಲೂ ಈ ಕಾಲದ ಕನ್ನಡ ಸಾಹಿತ್ಯವು ಸಂಸ್ಕೃತವನ್ನು ಅನುಸರಿಸಿದೆ.

2 ಕಾಮೆಂಟ್‌ಗಳು: