ಗುರುವಾರ, ಆಗಸ್ಟ್ 14, 2014

ಮಾಸ್ತಿಯಾದ ಮಹಾಸತಿ ದೇಕಬ್ಬೆ

(ಲೇಖಕರು: ಡಾ|| ಎಚ್.ಎಸ್.ಗೋಪಾಲ ರಾವ್)
ಇತ್ತೀಚಿನ ದಿನಗಳಲ್ಲಿ ಪ್ರಾಚೀನವಾದ ಎಷ್ಟೋ ಆಚರಣೆಗಳು ಅರ್ಥ ಕಳೆದುಕ್ಕೊಳ್ಳುತ್ತಿವೆ. ಇದು ಅನಿವಾರ್ಯವಷ್ಟೇ ಅಲ್ಲದೆ ಗತ್ಯವೂ ಹೌದು ಎಂಬ ಬಗ್ಗೆ ಎರಡು ಮಾತಿಲ್ಲ. ಹಿಂದಿನ ಕಾಲದ ಎಲ್ಲಾ ಆಚರಣೆಗಳೂ ಅರ್ಥಪೂರ್ಣ ಎಂದೇನೂ ಭಾವಿಸಬೇಕಿಲ್ಲ. ಆ ಕಾಲಕ್ಕೆ ಕೆಲವು ಆಚರಣೆಗಳು ಮಹತ್ವ ಪಡೆದಿದ್ದವು ಅಥವಾ ಅರ್ಥ ಪಡೆದಿದ್ದವು. ಈ ಅಭಿಪ್ರಾಯವೂ ಸಹ ಸರ್ವಸಮ್ಮತವಲ್ಲ. ಯಾವುದೇ ಕಾಲದ ಯಾವುದೇ ಆಚರಣೆಯು ಸಮಾಜದ ಎಲ್ಲರ ಅನುಮತಿ ಪಡೆದಿರುವುದಿಲ್ಲ ಮತ್ತು ಅದು ಎಲ್ಲರಿಗೂ ಪ್ರಿಯವಾಗಿರಬೇಕು ಎಂದು ನಿರೀಕ್ಷಿಸುವುದೂ  ಸರಿಯಲ್ಲ.
ಭಾರತದಲ್ಲಿ ಸ್ತ್ರೀಯರಿಗೆ ಗೌರವ ಹೆಚ್ಚು. ಅವಳನ್ನು ದೇವತೆಗೆ ಸಮೀಕರಿಸುವುದು ಮೊದಲಿನಿಂದ ಬಂದ ಪದ್ಧತಿ. ಭಾರತೀಯ ಸಮಾಜದಲ್ಲಿ ಮಾತೃದೇವತೆಗೆ ಮಹತ್ವದ ಸ್ಥಾನವಿದೆ. ಯತ್ರನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ ಎಂಬ ಪ್ರಸಿದ್ಧ ಹೇಳಿಕೆ ಇದೆ. ಇಂತಹ ಹೇಳಿಕೆಗಳನ್ನು ಗುಮಾನಿಯಿಂದ ನೋಡುವ ಸ್ವಾತಂತ್ರ್ಯವೂ ನಮಗಿದೆ. ಹೆಣ್ಣನ್ನು ಕೇವಲ ಕಾಮುಕ ದೃಷ್ಟಿಯಿಂದ ನೋಡದೆ ಗೌರವದಿಂದ ಕಂಡ ಉದಾಹರಣೆಗಳೂ ಇವೆ. ರಾಷ್ಟ್ರಕೂಟ ದೊರೆ ಮೂರನೆಯ ಕೃಷ್ಣನು ಶುಚಿತ್ವಕ್ಕೆ ಹೆಸರಾದವನು. ಮಧ್ಯಪ್ರದೇಶದ ಜುರ ಎಂಬ ಸಣ್ಣ ಹಳ್ಳಿಯಲ್ಲಿ ದೊರೆತಿರುವ ಒಂದು ಕನ್ನಡ ಶಾಸನವು ಅವನನ್ನು ಪರಾಂಗನಾ ಪುತ್ರಕ ಎಂದು ಹೊಗಳಿದೆ; ಅಲ್ಲದೆ ಪರಸ್ತ್ರೀಯರನ್ನು ನೋಡಿದಾಗ ಆವನಿಗೆ ಬಸಿರೊಳಗಿಳ್ದು ಆಡಿದ ನೆನಪಾಗುತ್ತಿತ್ತಂತೆ. ಹೀಗೆ ಹೆಣ್ಣುಗಳನ್ನು ಗೌರವದಿಂದ ಕಂಡ ಸಮಾಜವೇ, ಅವರನ್ನು ತೊತ್ತಿನ ಸೂಳೆಯರನ್ನಾಗಿಯೂ ಮಾಡಿದೆ. ಸಾಮಾನ್ಯವಾಗಿ ಹೆಣ್ಣು ಎಂದ ತಕ್ಷಣ ಆಕೆಯನ್ನು ಭೋಗದ ವಸ್ತುವಾಗಿ ಕಲ್ಪಿಸಿಕೊಳ್ಳುವ ಕ್ಷುಲ್ಲಕ ಮನೋಭಾವ  ಕೆಲವು ಜನರಿಗಾದರೂ ಇದೆ. ಆದರೆ ಅವಳನ್ನು ತಾಯಿ, ಅಕ್ಕ ಮತ್ತು ತಂಗಿಯಾಗಿಯೂ ಪ್ರೀತಿ ಮತ್ತು ಗೌರವದಿಂದ ಕಂಡು ರಕ್ಷಿಸುವ ಮನೋಭಾವವೂ ಅನೇಕರಿಗೆ ಇದೆ ಎನ್ನವುದನ್ನು ಅಲ್ಲಗಳೆಯಲು ಆಗುವುದಿಲ್ಲ.
ಹೆಣ್ಣಿಗೆ ಶೀಲವು ಬಹಳ ಮುಖ್ಯ ಮತ್ತು ಪವಿತ್ರ ಎಂದು ತಿಳಿಯಲಾಗಿದೆ. ಈ ಬಗ್ಗೆ ಯಾವುದೇ ಪ್ರತ್ಯೇಕ ವ್ಯಾಖ್ಯಾನವು ಅವಶ್ಯಕವಿಲ್ಲ ಎಂದು ಭಾವಿಸಲಾಗಿದೆ. ಹೆಣ್ಣು ತನ್ನ ಶೀಲವನ್ನು ರಕ್ಷಿಸಿಕೊಳ್ಳಲು ಆದ್ಯತೆ ನೀಡುತ್ತಾಳೆ ಮತ್ತು ಆ ನಿಟ್ಟಿನಲ್ಲಿ ಪುರುಷನ ನೆರವೂ ಇರುತ್ತದೆ. ಸ್ತ್ರೀಯರ ಮಾನರಕ್ಷಣೆಯಲ್ಲಿ ಪುರುಷ ವಹಿಸಿರುವ ಪಾತ್ರವನ್ನು ಕುರಿತಂತೆ ಪೆಣ್ಬುಯ್ಯಲ್ ಪ್ರಸಂಗಗಳು ದಾಖಲಿಸಿವೆ.
ಹೆಣ್ಣು ತನ್ನ ಶೀಲರಕ್ಷಣೆಯ ವಿಚಾರದಲ್ಲಿ ಅನುಸರಿಸಿದ ಒಂದು ಮುಂಜಾಗರೂಕತಾ ಕ್ರಮವೇ ಸತಿ ಹೋಗುವುದು. ತನ್ನ ಪತಿಯ ಸಾವಿನೊಡನೆ ತನ್ನ ಸಾವನ್ನೂ ಕಂಡುಕೊಳ್ಳುವ ಪದ್ಧತಿಯು ಯಾವುದೇ ನಾಗರಿಕ ಸಮಾಜಕ್ಕೂ ಗೌರವ ತರುವಂತಹುದಲ್ಲ ಎಂಬುದನ್ನು ವಿಚಾರವಂತರಾದ ಎಲ್ಲರೂ ಒಪ್ಪುತ್ತಾರೆ. ವಿಧವೆಯಾದ, ಬದುಕನ್ನು ಇನ್ನೂ ಸರಿಯಾಗಿ ತಿಳಿಯದ ಹೆಣ್ಣನ್ನು ವಿರೂಪಗೊಳಿಸುವ ಕ್ರೌರ್ಯವನ್ನು ಯಾವುದೇ ಉದಾತ್ತ ನಾಗರಿಕ ಸಮಾಜವೂ ಸಮರ್ಥಿಸಲು ಸಾಧ್ಯವಿಲ್ಲ. ಆದರೆ ಇದು ನಮ್ಮ ಸಮಾಜದಲ್ಲಿ ಬಹು ದೀರ್ಘ ಕಾಲ ಇದ್ದ ಒಂದು ದುಷ್ಟ ಸಂಪ್ರದಾಯ ಎನ್ನುವ ಅಭಿಪ್ರಾಯಕ್ಕೆ ಹೆಚ್ಚು ವಿರೋಧ ಇರಲಾರದು. ಗಂಡನ ಸಾವಿನ ನಂತರ ಹೆಣ್ಣಾದವಳು ಜೀವನದಲ್ಲಿ ಎದುರಿಸಬೇಕಾದ ಅನೇಕ ತೊಂದರೆಗಳಿಂದ ಬಿಡುಗಡೆ ಪಡೆಯಲು ಹಾಗೂ ಶೀಲ ರಕ್ಷಣೆ ಮಾಡಿಕೊಳ್ಳಲು ಸತಿ ಹೋಗಲು ನಿರ್ಧರಿಸುತ್ತಿದ್ದಂತೆ ತೋರುತ್ತದೆ. ಸತಿ ಹೋಗುವುದು ಎಂದರೆ ಸತಿಯಾದವಳು ಗಂಡನ ಸಾವಿನ ನಂತರ ಅವನ ಜೊತೆಗೆ (ಸಹಗಮನ) ಆಥವಾ ಅವನನ್ನು ಅನುಸರಿಸಿ (ಅನುಗಮನ) ಸಾವಿಗೆ ಅಣಿಯಾಗುವುದು. ಇದು ಕಡ್ಡಾಯವಾಗಿರಲಿಲ್ಲ ಎನ್ನುವುದನ್ನು ಲಕ್ಕುಂಡಿಯ ಪ್ರಸಿದ್ಧ ಅತ್ತಿಮಬ್ಬೆಯ ಶಾಸನ ಖಚಿತಪಡಿಸಿದೆ. ಅತ್ತಿಮಬ್ಬೆಯ ಗಂಡ ನಾಗದೇವ ಸತ್ತಾಗ ವನ ಕಿರಿಯ ಹೆಂಡತಿ, ಅತ್ತಿಮಬ್ಬೆಯ ತಂಗಿ ಗುಂಡಮಬ್ಬೆ ಮಾತ್ರ ಸತಿಹೋದಳು. ಮಗನಾದ ಅಣ್ಣಿಗದೇವನ ರಕ್ಷಣೆಗೆ ಅತ್ತಿಮಬ್ಬೆ ಉಳಿದಳು. ಚಿಕ್ಕ ವಯಸ್ಸಿನ ಹೆಣ್ಣು ಸತಿ ಹೋಗುವುದನ್ನು ತಪ್ಪಿಸಲು ಕುಟುಂಬದ ಮತ್ತು ಊರಿನ ಹಿರಿಯರು ಪ್ರಯತ್ನಿಸುತ್ತಿದ್ದ ಹಲವು ಉದಾಹರಣೆಗಳಿವೆ. ಆದರೆ ತಮ್ಮ ಗಂಡ ಸತ್ತಾಗ, ಸಾವಿನಲ್ಲೂ ಅವನನ್ನು ಹಿಂಬಾಲಿಸಲು ಭಾರತೀಯ ನಾರಿಯರು ಇಚ್ಛಿಸುತ್ತಿದ್ದರು ಎಂದು ತಿಳಿಯಲಾಗಿದೆ. ಇಂತಹ ಒಂದು ಉದಾಹರಣೆಯನ್ನು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನ ಬೆಳತೂರು ಗ್ರಾಮದ ಒಂದು ಶಾಸನ ದಾಖಲಿಸಿದೆ.
ಇಂತಹ ಸತಿ ಪದ್ಧತಿಗೆ
­೧) ಸತ್ತವನ ಶವದ ಜೊತೆಗೆ ಅವನಿಗೆ ಪ್ರಿಯವಾದ ವಸ್ತುಗಳನ್ನು ಇಡುವುದು
೨) ಮುಂದಿನ ಜನ್ಮದಲ್ಲಿಯೂ ಗಂಡ-ಹೆಂಡಿರಾಗಿಯೇ ಇರುವುದು
೩) ಮರಣಾನಂತರ ಹೆಂಡತಿ ಬೇರೆಯವರ ಪಾಲಾಗದಿರುವುದು ಇತ್ಯಾದಿ ಕಾರಣಗಳು ಪ್ರೇರಣೆ ಎಂದು ತಿಳಿಯಲಾಗಿದೆ.
ಇಂತಹ ಪದ್ಧತಿಯು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿತ್ತು ಎಂದೇನೂ ಭಾವಿಸಬೇಕಾಗಿಲ್ಲ. ಭಾರತದಲ್ಲಿ ರಾಮಾಯಣ ಮತ್ತು ಮಹಾಭಾರತದ ಕಾಲದಲ್ಲೇ ಸತಿ ಪದ್ದತಿ ಇತ್ತು ಎನ್ನುವುದು ತಿಳಿದಿದೆ. ಪಾಂಡುವಿನ ಹೆಂಡತಿ ಮಾದ್ರಿ ಮತ್ತು ಕೃಷ್ಣನ ಹೆಂಡತಿಯರಲ್ಲಿ ಕೆಲವರು ತಮ್ಮ ಗಂಡಂದಿರ ಮರಣಾನಂತರ ಅಗ್ನಿಪ್ರವೇಶ ಮಾಡಿದರಂತೆ. ಉತ್ತರ ಭಾರತದಲ್ಲಿ ದಕ್ಷಿಣ ಭಾರತಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಸತಿ ಪದ್ದತಿ ಇತ್ತು ಎನ್ನುವುದು ತಿಳಿದಿದೆ. ಕ್ರಿ.ಶ.೧೦ನೆಯ ಶತಮಾನದ ವೇಳೆಗೆ ಕರ್ನಾಟಕದಲ್ಲಿ ಸತಿ ಪದ್ದತಿ ಇದ್ದ ಸುಳಿವುಗಳು ದೊರೆತಿವೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಬೆನ್ನೂರಿನ ಒಂದು ಶಾಸನದ ಕಾಲ ಕ್ರಿ.ಶ.೯೭೨. ಸದ್ಯಕ್ಕೆ ದೊರೆತಿರುವ ಸತಿಪದ್ದತಿಯನ್ನು ಕುರಿತ ಮೊದಲ ಶಾಸನ ಇದು. ಬಿದಿಯಣ್ಣ ಸತ್ತಾಗ ಅವನ ಹೆಂಡತಿ ಜಕ್ಕರ್ಬೆ ಸತಿ ಹೋದದ್ದನ್ನು ಶಾಸನ ದಾಖಲಿಸಿದೆ. ಜಕ್ಕರ್ಬೆಯದು ಸಹಗಮನ. ಗಂಡನ ಸಾವಿನ ನಂತರ ಅಥವಾ ಸಾವಿನ ಸುದ್ದಿ ತಿಳಿದ ನಂತರ ಅಣಿಯಾಗಿ ಸಾಯುವುದು ಅನುಗಮನ. ಅಂತಹ ಅನುಗಮನದ ಒಂದು ದಾಖಲೆಯೇ ಪ್ರಸ್ತುತ ಪ್ರಸ್ತಾಪಿಸುತ್ತಿರುವ ಶಾಸನ.
ಬೆಳತೂರಿನ ಬಿನಕಲಮ್ಮನ ಗುಡಿಯ ಬಳಿ ಇರುವ ಶಾಸನವು ಚೋಳ ರಾಜ ರಾಜೇಂದ್ರದೇವನ ಆಳ್ವಿಕೆಯ ಆರನೆಯ ವರ್ಷ ಹಾಗೂ ಶಕವರ್ಷ ೯೭೯ನೆಯ ಹೇಮಳಂಬಿ ಸಂವತ್ಸರದ ಕಾರ್ತೀಕ ಮಾಸದ ಕೃಷ್ಣ ಪಕ್ಷ ದ್ವಾದಶಿ ಸೋಮವಾರದಂದು ದಾಖಲಿತವಾಗಿದೆ. ಕ್ರಿ.ಶ. ವರ್ಷಗಳಲ್ಲಿ ಉಕ್ತ ಕಾಲವು ೨೭-೧೦-೧೧೫೭ಕ್ಕೆ ಸರಿಹೊಂದುತ್ತದೆ. ಶಾಸನವು ದೇಕಬ್ಬೆ ಎಂಬ ಹೆಣ್ಣು ಸತಿ ಹೋದ ವಿಷಯವನ್ನು ವಿವರಿಸಿದೆ. ದೇಕಬ್ಬೆಯ ಗಂಡ ಏಚ. ಏಚನು ನವಲೆನಾಡ ಅಧಿಪತಿ. ಕುರುವನ್ದ ಕುಲಕ್ಕೆ ಸೇರಿದವನು. ವೀರನಾದ ಏಚನು ವಿನಯಚಿಂತಾಮಣಿ ಎನಿಸಿಕೊಂಡ ದೇಕಬ್ಬೆಯನ್ನು ಮದುವೆ ಆಗಿದ್ದ. ದೇಕಬ್ಬೆಯು ನುಗು ನಾಡ ಅಧಿಪ ರವಿಗನ ಮಗಳು. ಈ ವಂಶದವರು ಸಕಳ ಜಗಸ್ತುತರು, ವಚೋಗ್ರಗಣ್ಯರು, ಊರ್ಜಿತ ಪುಣ್ಯರು ಮತ್ತು ವಿಸ್ತಾರ ಚಾರುವೀರರು. ಇಂತಹ ವಂಶದಲ್ಲಿ ರವಿಗ ಹುಟ್ಟಿದ್ದ. ರವಿಗನ ಹುಟ್ಟಿನೊಡನೆ ಅರಿವು, ಅರವಿನೊಡನೆ ಆಯವೂ, ಆಯದೊಡನೆ ಚಾಗವೂ ಹುಟ್ಟಿದವು ಎಂದು ಶಾಸನ ಕವಿ ಹೊಗಳಿದ್ದಾನೆ. ರವಿಗ ಮತ್ತು ಪೊನ್ನಕ್ಕನ ಮಗಳು ದೇಕಬ್ಬೆ.
ಯಾವ ಕಾರಣಕ್ಕೋ ಏಚನು ತನ್ನ ದಾಯಾದಿಗಳೊಡನೆ ಹೋರಾಡಿ, ಅವರಲ್ಲೊಬ್ಬನನ್ನು ಕೊಂದನೆಂಬ ಕಾರಣದಿಂದ ಚೋಳನ ಕಡೆಯವರು ಅವನನ್ನು ಬಂಧಿಸಿ ತಲಕಾಡಿಗೆ ಕರೆದೊಯ್ದರು. ಏಚನ ಅಪರಾಧಕ್ಕೆ ಅಲ್ಲಿ ಮರಣದಂಡನೆಯನ್ನು ವಿಧಿಸಲಾಯಿತು. ಅವನ ಸಾವಿನ ಸುದ್ದಿ ತಿಳಿದ ತಕ್ಷಣ ದೇಕಬ್ಬೆಯು ಸತಿ ಹೋಗುವ ನಿರ್ಧಾರ ಮಾಡಿದಳು. ಈ ಪ್ರಸಂಗವನ್ನು ಶಾಸನ ಕವಿಯು ಒಂದೇ ಪದ್ಯದಲ್ಲಿ ವರದಿ ಮಾಡಿದ್ದಾನೆ. ಕಲಿಕಾಲವೇಳನೆನಿಸಿದ ಕಲಿಚಾಗಿಯನಿಱದು ಕೊನ್ದಱೆಂಬುದು ಮಾತಂ ಲಲಿತಾಂಗಿ ಕೇಳ್ದ ರವಿಗನ ಕುಲದೀಪಕಿ ಸಾಯಲೆನ್ದು ಕೊಣ್ಡಕೆ ನಡೆದಳ್. ಸಾಯುವ ನಿರ್ಧಾರ ದೇಕಬ್ಬೆಯದು. ಅದು ಬೇರೆಯವರ ಬಲವಂತದಿಂದ ತೆಗೆದುಕೊಂಡ ನಿರ್ಧಾರವಾಗಿರಲಿಲ್ಲ. ಬೇರೆಯವರು ಅವಳ ನಿರ್ಧಾರವನ್ನು ಒಪ್ಪದೆ ವಿರೋಧಿಸಿದರು. ತಂದೆ, ತಾಯಿ, ಬಂಧುಗಳೆಲ್ಲರೂ ಸಾಯುವುದು ಬೇಡ ಎಂದು ಬುದ್ದಿ ಹೇಳಿದರು. ಆದರೆ ದೇಕಬ್ಬೆಯ ನಿರ್ಧಾರವು ಅಚಲವಾಗಿತ್ತು. ನುಗುನಾಡಧಿಪತಿ ರವಿಗನ ಮಗಳಾಗಿಯುಮನ್ತೆ ನವಿಲೆನಾಡಧಿಪತಿಗಾಂ ನೆಗಳೆ ಸತಿಯಾಗಿ ಬಾಳ್ವುದು ಬಗೆದರ್ಪ್ಪೆನೆ ಕೊಟ್ಟ ಕೊಣ್ಡ ಮನೆಯೆಸಮಱಯಲ್ ಎಂದು ಎಲ್ಲರ ಮಾತನ್ನು ನಯದಿಂದ ತಳ್ಳಿಹಾಕಿ, ಭೂಮಿ, ಹೊನ್ನ ಉಡುಗೆ, ಗೋವು, ಧನ ಇತ್ಯಾದಿಗಳನ್ನು ದಾನ ಮಾಡುತ್ತಾ ದೇಕಬ್ಬೆ ಕೈಮುಗಿದು ಉರಿಯುತ್ತಿದ್ದ ಬೆಂಕಿಯನ್ನು ಪ್ರವೇಶಿಸಿದಳು.
ಹೀಗೆ ಶ್ರೀರಮಣಿಗೌರಿಸಚಿಧಾರಿಣಿಯಪುತ್ರಿರತಿ ಭೂರಮಣಿಯನ್ದದ ಸರೂಪವಾಱ ವೊಳ್ಪೌದಾರೆ ಜಯಧಾರೆ ಜಸಧಾರೆ ನಯಧಾರೆ ಭಯಹಾರೆ ಪತಿಭಕ್ತೆ ಧೃತಶಕ್ತೆ ದೇಕಬ್ಬೆ ಸತಿ ಹೋದಳು. ಇಂತಹ ನಾರೀರತ್ನಕ್ಕೆ ಸಮನಾರು ಎಂದು ಶಾಸನ ಕವಿ ಪ್ರಶ್ನಿಸಿದ್ದಾನೆ.
ಮಗಳ ನೆನಪಿಗಾಗಿ ರವಿಗನು ಮಾಸ್ತಿಕಲ್ಲನ್ನು ಹಾಕಿಸಿದ್ದಾನೆ. ಅನುಗಮನವನ್ನು ಕುರಿತ ಈ ಶಾಸನವು ದೇಕಬ್ಬೆಯ ಅಚಲ ನಿರ್ಧಾರವನ್ನು ತಿಳಿಸುತ್ತದೆ; ಜೊತೆಗೆ ಆ ಕಾಲಕ್ಕೆ ಸತಿ ಹೋಗುವ ಪದ್ದತಿಯು ಕಡ್ಡಾಯವೇನೂ ಆಗಿರಲಿಲ್ಲ ಎಂದು ಖಚಿತಪಡಿಸುತ್ತದೆ. ಸತಿ ಹೋಗುವುದು ಐಚ್ಛಿಕ ವಿಷಯವಾಗಿತ್ತು. ಸತಿ ಹೋಗುವುದನ್ನು ತಡೆಯುವ ಪ್ರಯತ್ನಗಳೂ ನಡೆಯುತ್ತಿದ್ದುದನ್ನು ಶಾಸನವು ಸ್ಪಷ್ಟಪಡಿಸಿದೆ.
ಕರ್ನಾಟಕದಲ್ಲಿ ಮಾಸ್ತಿಕಲ್ಲುಗಳು ವಿರಳವಲ್ಲ. ಒಕ್ಕೈ ಮಾಸ್ತಿಕಲ್ಲುಗಳಾಗಲೀ, ಸತಿಯ ಶಿಲ್ಪಸಹಿತ ಮಾಸ್ತಿಕಲ್ಲುಗಳಾಗಲೀ, ಶಾಸನಸಹಿತ ಮಾಸ್ತಿಕಲ್ಲುಗಳಾಗಲೀ ಶಾಸನರಹಿತ ಮಾಸ್ತಿಕಲ್ಲುಗಳಾಗಲೀ ನಾಡಿನ ಸಾಂಸ್ಕೃತಿಕ ಬದುಕಿನ ಅಧ್ಯಯನಕ್ಕೆ ಸಹಾಯ ಮಾಡುತ್ತವೆ.