ಮಂಗಳವಾರ, ಮಾರ್ಚ್ 8, 2011

ಕನ್ನಡ ಸಾಹಿತ್ಯದ ಸ್ವಾತಂತ್ರ್ಯ ಯುಗ – ಭಾಗ-೧ (ಬಸವಣ್ಣ, ಹರಿಹರ ಮತ್ತು ರಾಘವಾಂಕ)

೧೨ನೆಯ ಶತಮಾನದಲ್ಲಿ ಕನ್ನಡ ಸಾಹಿತ್ಯದ ಸ್ವಾತಂತ್ರ್ಯ ಯುಗ ಪ್ರಾರಂಭವಾಯಿತೆಂದು ಹೇಳಬಹುದು.
ಬಸವಣ್ಣ:
·         ಸುಮಾರು ಕ್ರಿ.ಶ.೧೧೯೦ರ ವೇಳೆಗೆ ಬಸವಣ್ಣ ಪ್ರಸಿದ್ಧಿಗೆ ಬಂದು ಕನ್ನಡ ಸಾಹಿತ್ಯಕ್ಕೆ ಹೊಸ ಹಾದಿ ಹಾಕಿಕೊಟ್ಟರು.
·         ಬಸವಣ್ಣನವರ ಉದ್ದೇಶ ಮತಪ್ರಚಾರವೇ ಹೊರತು ಕಾವ್ಯರಚನೆಯಲ್ಲ. ಜನರಿಗೆ ತಿಳಿಯುವ ಸುಲಭ ಭಾಷೆಯ ಲಲಿತ ಮಾರ್ಗದಲ್ಲಿಯೇ ಪ್ರಚಾರ ಆಗಬೇಕು ಎಂಬುದನ್ನರಿತ ಬಸವಣ್ಣ ತನ್ನ ಧರ್ಮಬೋಧೆಯನ್ನು ವಚನಗಳ ಮೂಲಕ ಮಾಡಿದರು.
·         ಸಾಮಾನ್ಯ ಜನರಿಗೂ ಅರ್ಥವಾಗುವ ಕಾವ್ಯರೀತಿಯೇ ವಚನ. ಇವು ಸುಂದರವೂ ಮನಮೊಹಕವೂ ಆಗಿರುತ್ತವೆ. ಇವುಗಳ ಮೂಲಕ ಮತಪ್ರಚಾರಕ್ಕೆ ಹೊರಟ ಬಸವಣ್ಣನವರಿಂದ ಸಾಹಿತ್ಯಾಭಿವೃದ್ಧಿಯೂ ಆಯಿತು.
·         ಬಸವಣ್ಣನವರ ವಚನಗಳು ಆಗಿನ ಸಾಮಾಜಿಕ ಸ್ಥಿತಿ-ಗತಿಗಳನ್ನು ವಿವರಿಸುತ್ತವೆ.
·         ಬಸವಣ್ಣನ ವ್ಯಕ್ತಿತ್ವವನ್ನು, ಅವರ ಜೀವನದ ಅನುಭವಗಳನ್ನೂ ನಿರೂಪಿಸುವ ಹಲವು ವಚನಗಳು ದೊರೆಯುತ್ತವೆ.
·         ವಚನಗಳ ಭಾಷೆ ಬಹಳ ತಿಳಿ. ಅನಾವಷ್ಯಕವೂ ಕ್ಲಿಷ್ಟವೂ ಆದ ಸಂಸ್ಕೃತದ ಮಿಶ್ರಣವಿಲ್ಲ. ವಾಗಾಡಂಬರವಿಲ್ಲ.
·         ವಚನಗಳು ಪಂಡಿತ ರಂಜನೆಗಾಗಿ, ರಾಜಾಸ್ಥಾನಗಳಿಗಾಗಿ ರಚಿತವಾಗಲಿಲ್ಲ.
·         ವಚನಗಳು ಬಹಳಮಟ್ಟಿಗೆ ಗದ್ಯದಂತೆ ಇದ್ದರೂ ಕೆಲವು ಹಾಡುವುದಕ್ಕೂ ಬರುತ್ತವೆ. ಜಂಗಮರು ವಚನಗಳನ್ನು ತಮ್ಮ ಏಕನಾದದ ಶ್ರುತಿಯೊಂದಿಗೆ ಹಾಡುವುದುಂಟು.
·         ಗಹನವಾದ ತತ್ವಗಳನ್ನು ಉಪದೇಶಿಸುವ ಹಲವು ವಚನಗಳಿಂದ ಅಚ್ಚಕನ್ನಡದ ಶಕ್ತಿಯನ್ನು ಕಂಡುಕೊಳ್ಳಬಹುದು.
·         ಅನೇಕ ವಚನಗಳು ಆಶುಕವಿತ್ವಗಳು. ಆಯಾ ಸಂದರ್ಭದಲ್ಲಿ ತೋರಿದ ಅಭಿಪ್ರಾಯಗಳನ್ನು ಹೇಳುತ್ತವೆ.
·         ಬಸವಣ್ಣ ತನ್ನ ಸುಖ-ದುಃಖಗಳನ್ನೆಲ್ಲಾ ಶಿವನಿಗೆ ಅರ್ಪಿಸಿ ಶರಣಾದರು. ಶಿವ ಸಾಕ್ಷಾತ್ಕಾರವನ್ನು ಹೊಂದಿದರು. ತರುವಾಯ ಜನರಿಗೆ ಧರ್ಮೋಪದೇಶ ಮಾಡಿದರು. ಷಟ್ಸ್ಥಲ ಸಿದ್ಧಾಂತವನ್ನು ಜನರಿಗೆ ಉಪದೇಶಿಸಿ ಲಿಂಗೈಕ್ಯ ಸಾಧನೆಗೆ ಹಾದಿ ತೋರಿದರು.
·         ಭಕ್ತರ ಕರ್ತವ್ಯಗಳನ್ನು ನಿರೂಪಿಸಿದರು. ಲಿಂಗಾರ್ಚನೆ, ಜಂಗಮಾರಾಧನೆ ಇವು ಭಕ್ತರ ಮುಖ್ಯ ಕರ್ತವ್ಯಗಳು.
·         ಬಸವಣ್ಣ ಜಂಗಮವೇ ಲಿಂಗ ಎಂದು ಸಾರಿದರು. ಜಂಗಮರು ಭಿಕ್ಷಾಟನೆಯನ್ನೇ ನೆಚ್ಚಿಕೊಂಡು ಸ್ವಾವಲಂಬಿಗಳಾಗದೆ ಕೆಡಬಾರದು ಎಂಬ ಯೋಚನೆಯಿಂದ ಕಾಯಕವ ಮಾಡಿರಣ್ಣ, ಕಾಯಕವೇ ಕೈಲಾಸ ಎಂದು ನುಡಿದರು.
·         ಕೇವಲ ದೇವರ ನಾಮಸ್ಮರಣೆಯಿಂದ ಧನ್ಯನಾದೆನೆಂದು ಭಾವಿಸುವುದು ಹೆಡ್ಡತನ ಎಂದು ಮಾತ್ರವಲ್ಲದೆ, ದೇವರ ಪ್ರೀತಿಯನ್ನು ಪಡೆಯುವ ಮಾರ್ಗವನ್ನು ಬಸವಣ್ಣ ವಚನದಲ್ಲಿ ಹೀಗೆ ಬರೆದಿದ್ದಾರೆ.
ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ,
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ,
ಇದೇ ನಮ್ಮ ಕೂಡಲ ಸಂಗಮ ದೇವರನೋಲಿಸುವ ಪರಿ
ಬಸವಣ್ಣನವರ ಅನೇಕ ಸಮಕಾಲೀನರು ವಚನಗಳನ್ನು ಬರೆದಿದ್ದಾರೆ. ಅಲ್ಲಮಪ್ರಭು, ಸಿದ್ಧರಾಮ, ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ, ದೇವರ ದಾಸಿಮಯ್ಯ ಮೊದಲಾದ ಶಿವಶರಣರು ವಚನಗಳನ್ನು ರಚಿಸಿದ್ದಾರೆ.
ಅನೇಕ ಸ್ತ್ರೀ ಶಿವಶರಣೆಯರೂ ವಚನಗಳನ್ನು ರಚಿಸಿದ್ದಾರೆ. ಇಂಥ ವಚನಕಾರ್ತಿಯರ ಪೈಕಿ ಅಕ್ಕಮಹಾದೇವಿ ಪ್ರಮುಖಳಾದವಳು.
ವಚನಕಾರರೆಲ್ಲರೂ ಸಾಮಾನ್ಯವಾಗಿ ತಮ್ಮ ಇಷ್ಟದೇವತೆಯ ಅಂಕಿತದಲ್ಲಿ ವಚನಗಳನ್ನು ಬರೆದಿದ್ದಾರೆ.
ಹರಿಹರ:
·         ವೀರಶೈವ ವಚನ ಸಾಹಿತ್ಯ ಬೆಳೆಯುತ್ತಿರಲು ಸುಮಾರು ೧೨೦೦ರ ವೇಳೆಗೆ ಹಂಪೆಯಲ್ಲಿ ಹರಿಹರ ಕವಿಯು ಪ್ರಸಿದ್ಧನಾದನು.
·         ಈತ ಗಿರಿಜಾಕಲ್ಯಾಣ ಎಂಬ ಚಂಪೂ ಕಾವ್ಯವನ್ನು ಬರೆದಿದ್ದರೂ ರಗಳೆಯ ಕವಿ ಎಂದೇ ಪ್ರಸಿದ್ಧನಾಗಿದ್ದಾನೆ.
·         ಹರಿಹರ ಶಿವಶರಣರ ಚರಿತ್ರೆಗಳನ್ನೆಲ್ಲ ರಗಳೆಯ ಛಂದಸ್ಸಿನಲ್ಲಿ ಬರೆದಿದ್ದಾನೆ.
·         ಬಸವರಾಜ ದೇವರ ರಗಳೆ, ಪುಷ್ಪ ರಗಳೆ, ಪ್ರಭುದೇವರ ರಗಳೆ ಮೊದಲಾದ ಕಾವ್ಯಗಳನ್ನು ಹರಿಹರ ಬರೆದಿದ್ದಾನೆ.
·         ಕನ್ನಡದ ಛಂದಸ್ಸನ್ನು ಬಳಕೆಗೆ ತಂದು ಕನ್ನಡ ಸಾಹಿತ್ಯವಾಹಿನಿಗೆ ಹೊಸ ಕಾಲುವೆಯನ್ನು ನೀಡಿದ ಕೀರ್ತಿ ಹರಿಹರನಿಗೆ ಸಲ್ಲತಕ್ಕದ್ದು.
·         ಓದುಗರಲ್ಲಿ ಭಕ್ತಿಯ ಉದ್ರೇಕವಾಗುವಂತೆ ಬರೆದವನು ಹರಿಹರ. ಆನಂತರದ ಅನೇಕ ವೀರಶೈವ ಕವಿಗಳಿಗೆ ಅವನು ಮಾದರಿಯಾದನು.
ರಾಘವಾಂಕ:
·         ಈತ ಹಂಪೆಯ ಹರಿಹರನ ಸೋದರಳಿಯ ಹಾಗೂ ಶಿಷ್ಯ.
·         ರಾಘವಾಂಕ ಹರಿಶ್ಚಂದ್ರ ಕಾವ್ಯ, ಸಿದ್ಧರಾಮ ಪುರಾಣ, ಸೋಮನಾಥ ಚರಿತೆ ಮುಂತಾದ ಕಾವ್ಯಗಳನ್ನು ಬರೆದು ಕನ್ನಡ ಛಂದಸ್ಸಿನ ಷಟ್ಪದಿಯನ್ನು ಬಳಕೆಗೆ ತಂದನು.
·         ರಾಘವಾಂಕನು ಸಂಸ್ಕೃತದಲ್ಲಿಯೂ ಪಂಡಿತನಾಗಿದ್ದು ಐತರೇಯ ಬ್ರಾಹ್ಮಣ ಮೊದಲಾದುವನ್ನು ಓದಿದ್ದಂತೆ ತೋರುತ್ತದೆ.
·         ರಾಘವಾಂಕನ ಹರಿಶ್ಚಂದ್ರ ಕಾವ್ಯದಲ್ಲಿ ಈಗ ಪ್ರಚಾರದಲ್ಲಿಲ್ಲದ ಐತರೇಯ ಬ್ರಾಹ್ಮಣದಲ್ಲಿ ವರ್ಣಿತವಾಗಿರುವ ಹರಿಶ್ಚಂದ್ರನ ಕಥೆಯ ಸೂಚನೆಯಿದೆ.
·         ರಾಘವಾಂಕನು ವಿಶ್ವಾಮಿತ್ರಾದಿಗಳ ಪಾತ್ರಗಳನ್ನು ರಚಿಸಿರುವ ರೀತಿಯು ಸ್ತೋತ್ರಾರ್ಹವಾಗಿದೆ.
·         ರಾಘವಾಂಕನ ಸಂಭಾಷಣೆಯ ಶೈಲಿಯು ಓದುಗರನ್ನು ಬೆರಗು ಮಾಡುತ್ತದೆ.
·         ರಾಘವಾಂಕ ತಾನೇ ಹೇಳಿಕೊಂಡಿರುವಂತೆ ಉಭಯಕವಿಕಮಲರವಿ.
ಆನಂತರದ ಕಾಲದಲ್ಲಿ ಚಾಮರಸ, ಭೀಮಕವಿ, ವಿರೂಪಾಕ್ಷ ಪಂಡಿತ ಮೊದಲಾದ ವೀರಶೈವ ಕವಿಗಳು ಷಟ್ಪದಿಯಲ್ಲಿ ಶಿವಶರಣರ ಚರಿತ್ರೆಗಳನ್ನು ಬರೆದರು. ಚಾಮರಸನ ಪ್ರಭುಲಿಂಗಲೀಲೆ, ಭೀಮಕವಿಯ ಬಸವಪುರಾಣ, ವಿರೂಪಾಕ್ಷ ಪಂಡಿತನ ಚೆನ್ನಬಸವಪುರಾಣ ಕನ್ನಡಿಗರಲ್ಲಿ ಪ್ರಸಿದ್ಧವಾಗಿವೆ.
ಷಟ್ಪದಿ ಅಚ್ಚಕನ್ನಡದ ಛಂದಸ್ಸು. ಕನ್ನಡದ ಸ್ವಾವಲಂಬನವನ್ನು ಎತ್ತಿ ತೋರಿಸಲು ನಿದರ್ಶನ.