ಸೋಮವಾರ, ಫೆಬ್ರವರಿ 7, 2011

ಕಪ್ಪೆ ಅರಭಟ್ಟನ ಮತ್ತೊಂದು ಶಾಸನ ಶೋಧ

ಕನ್ನಡ ಸಾಂಸ್ಕೃತಿಕ ಚರಿತ್ರೆ ಬಲ್ಲವರಿಗೆ ಕಪ್ಪೆ ಅರಭಟ್ಟನ ಹೆಸರು ಹೊಸದಲ್ಲ. ಕನ್ನಡ ಛಂದಸ್ಸಿನ ಅರಿವು ಇರುವವರಿಗಂತೂ ಅಂಶ ತ್ರಿಪದಿಯ ವಿಚಾರವನ್ನು ಪ್ರಸ್ತಾಪಿಸುವ ಸಂದರ್ಭದಲ್ಲಿ ಕಪ್ಪೆ ಅರಭಟ್ಟನ ಶಾಸನ ಪ್ರಮುಖ ಉದಾಹರಣೆಯಾಗುತ್ತದೆ. ಬಾದಾಮಿಯ ತಟ್ಟುಕೋಟೆಯ ಎದುರಿನ ಬಂಡೆಯಲ್ಲಿ ಕಲಾತ್ಮಕವಾಗಿ ಕೊರೆಯಲಾಗಿರುವ ಶಾಸನವು ಶಾಸನಾಸಕ್ತರಿಗೆ ಬಹಳ ಪ್ರಿಯವಾದುದು.
ಹಲ್ಮಿಡಿ ಶಾಸನವನ್ನು ಹೊರತುಪಡಿಸಿದರೆ ಹೆಚ್ಚು ಚರ್ಚೆಗೆ ಒಳಗಾಗಿರುವ ಶಾಸನವೂ ಕಪ್ಪೆ ಅರಭಟ್ಟನದೇ. ಈ ಕಪ್ಪೆ ಅರಭಟ್ಟ ಯಾರು ಎಂಬ ಜಿಜ್ಞಾಸೆಗೆ ಸದ್ಯಕ್ಕಂತೂ ಉತ್ತರ ದೊರೆಯುವ ಲಕ್ಷಣಗಳು ಕಾಣುತ್ತಿಲ್ಲ, ಕಪ್ಪೆ ಅರಭಟ್ಟ ಯಾರೇ ಆಗಿರಲಿ ಅವನಿಗೆ ಆ ಕಾಲದಲ್ಲಿ ಹೆಚ್ಚು ಗೌರವ ದೊರೆತಿತ್ತು ಎಂಬುದಕ್ಕೆ ಇತ್ತೀಚೆಗೆ ಹಲವು ಹೊಸ ಸಾಕ್ಷ್ಯಗಳು ದೊರೆಯುತ್ತಿವೆ. ತಟ್ಟುಕೋಟೆಯ ಶಾಸನದ ಪಾಠದ ಕೆಲವು ಸಾಲುಗಳು ಬೇರೆ ಬೇರೆ ಸ್ಥಳಗಳಲ್ಲಿ ಕಂಡುಬಂದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಶಿಬಾರಫಡಿ ಎಂಬ ಸ್ಥಳದಲ್ಲಿ ವರನ್ತೇಜಸ್ವಿನೋಮೃತ್ಯುರ್ನತುಮಾನಾವಖಣ್ಡನಂ ಮೃತ್ಯುಸ್ತತ್ಕ್ಷಣಿಕೋದುಃಖಮ್ಮಾನಭಂಗನ್ದಿನೇದಿನೇ ಎಂಬ ಎರಡು ಸಾಲಿನ ಶಾಸನ ಪತ್ತೆಯಾಗಿದೆ.
ಮೊದಲ ಹಸ್ತಮಾನದ ಕನ್ನಡ ಶಾಸನಗಳ ಸಂಪಾದನೆ ಮತ್ತು ವಿಶ್ಲೇಷಣೆಯಲ್ಲಿ ತೊಡಗಿರುವ ಡಾ|| ಷ.ಶೆಟ್ಟರ್ ಅವರ ಕೋರಿಕೆಯಂತೆ ಬಾದಾಮಿಯ ವಿದ್ವಾಂಸಮಿತ್ರ ಡಾ|| ಶೀಲಾಕಾಂತ ಪತ್ತಾರರು ಸಿಡಿಲಫಡಿಯ ದಕ್ಷಿಣ ಬಂಡೆ ಗೋಡೆಯ ಮೇಲಿನ ಕಷ್ಟಜನ ವರ್ಜ್ಜಿತನ್ ಕಲಿಯುಗ ವಿಪರೀತನ್ ಎಂಬ ಎರಡು ಸಾಲಿನ ಶಾಸನವನ್ನು ಪತ್ತೆ ಮಾಡಿ ಅಲ್ಲಿಯೂ ಕಪ್ಪೆ ಅರಭಟ್ಟನ ಶಾಸನದ ಒಂದು ಸಾಲು ಇರುವುದನ್ನು ಪ್ರಕಟಿಸಿದ್ದಾರೆ. ಈ ಮಾಹಿತಿಗಳ ಬೆನ್ನುಹತ್ತಿ ಡಾ|| ಶೀಲಾಕಾಂತ ಪತ್ತಾರರು ಕಳುಹಿಸಿದ್ದ ಸಿಡಿಲಫಡಿಯಲ್ಲೇ ಇರುವ ಒಂದು ಛಾಯಾಚಿತ್ರದಲ್ಲಿದ್ದ ಬಗ್ಗೆ ಡಾ|| ಎಚ್.ಎಸ್.ಗೋಪಾಲ ರಾವ್ ಅವರಿಗೆ ಕುತೂಹಲ ಹುಟ್ಟಿ, ಅಲ್ಲಿ ಸ್ಥಳ ಪರಿಶೀಲನೆ ಮಾಡಿದಾಗ ಡಾ|| ಶೀಲಾಕಾಂತ ಪತ್ತಾರರು ಕಳುಹಿಸಿದ್ದ ಅಸ್ಪಷ್ಟ ಛಾಯಾಚಿತ್ರದಲ್ಲಿದ್ದ ಶಾಸನವೇ ಕಪ್ಪೆ ಅರಭಟ್ಟನ ಮತ್ತೊಂದು ಶಾಸನ ಎಂಬುದು ಸ್ಪಷ್ಟವಾಯಿತು.
ಸಿಡಿಲಫಡಿಯಲ್ಲಿ ದೊರೆತಿರುವ ಕಪ್ಪೆ ಅರಭಟ್ಟನ ಹೊಸ ಶಾಸನ
ಸಿಡಿಲಫಡಿಯು ಒಂದು ತೆರೆದ ಗುಹೆ. ಇದು ಪ್ರಾಗಿತಿಹಾಸ ಕಾಲದ ಒಂದು ಪ್ರಮುಖ ನೆಲೆಯಾಗಿ ಪುರಾತತ್ವಜ್ಞರ ಗಮನ ಸೆಳೆದಿದೆ. ಇದು ಆದಿಹಳೆಯ ಶಿಲಾಯುಗದ ಮಾತ್ರವಲ್ಲದೆ ಮಧ್ಯಹಳೆಯ ಶಿಲಾಯುಗ, ಸೂಕ್ಷ್ಮ ಶಿಲಾಯುಗ ಮತ್ತು ಬೃಹತ್ ಶಿಲಾಯುಗದ ನೆಲೆಯಾಗಿಯೂ ಗಮನ ಸೆಳೆದಿದೆ. ತೆರೆದ ಗುಹೆಯ ಮೇಲಿನ ವಿಸ್ತಾರವಾದ ಬಂಡೆಯು ಮೇಲ್ಸೇತುವೆಯ ನೆನಪು ಮಾಡುತ್ತದೆ.
ಸಿಡಿಲಫಡಿಯ ಗುಹೆ (ಮೇಲ್ಸೇತುವೆಯಂತೆ ಕಾಣುತ್ತದೆ)
ಹಲವು ವಿದ್ವಾಂಸರು ಸ್ಥಳಪರಿಶೀಲನೆ ಮಾಡಿರುವ ಸಿಡಿಲಫಡಿಯ ಉತ್ತರ ಬಂಡೆ ಗೋಡೆಯ ಮೇಲಿರುವ ಬಹುತೇಕ ಕಲ್ಲು ಸವೆದಿರುವ ಕಾರಣ ಅಸ್ಪಷ್ಟವಾಗಿರುವ ೩ ಸಾಲಿನ ಶಾಸನವೇ ಕಪ್ಪೆ ಅರಭಟ್ಟನ ಮತ್ತೊಂದು ಶಾಸನವಾಗಿದೆ.
ಡಾ|| ಎಚ್.ಎಸ್.ಗೋಪಾಲ ರಾವ್ ಅವರು ಹೇಳುವಂತೆ ಹೊಸದಾಗಿ ದೊರೆತಿರುವ ಕ್ರಿ.ಶ. ಸುಮಾರು ೭ನೆಯ ಶತಮಾನದ ಮಧ್ಯಕಾಲಕ್ಕೆ ಸೇರುವ ಲಿಪಿಸ್ವರೂಪದ ಈ ೩ ಸಾಲಿನ ಶಾಸನವು ತಟ್ಟುಕೋಟೆಯ ಕಪ್ಪೆ ಅರಭಟ್ಟನ ಶಾಸನದಲ್ಲಿ ೬ ಸಾಲುಗಳಾಗಿದೆ. ಸಿಡಿಲಫಡಿಯ ಕಪ್ಪೆ ಅರಭಟ್ಟನ ಶಾಸನದ ಮಧ್ಯ ಭಾಗವು ಹೆಚ್ಚು ಸವೆದಿದ್ದು, ಸಾಲುಗಳ ಆರಂಭ ಮತ್ತು ಅಂತ್ಯದ ಭಾಗಗಳ ಅಕ್ಷರಗಳನ್ನು ಗುರುತಿಸುವುದು ಹೆಚ್ಚು ಕಷ್ಟ ಆಗುವುದಿಲ್ಲ. ಈಗ ಓದಲಾಗಿರುವ ಶಾಸನದ ಪಾಠವು ಈ ಕೆಳಕಂಡಂತಿದೆ:
೧. ಕಪ್ಪೆಅರಭಟ್ಟನ್ [ಶಿಷ್ಟಜನಪ್ರಿಯನ್ ಕಷ್ಟಜನ] ವರ್ಜ್ಜಿತನ್ ಕಲಿಯುಗ ವಿಪರೀತನ್
೨. ಸಾಧುಗೆ ಸಾಧು [ಮಾಧೂರ್ಯ್ಯಂಗೆ ಮಾಧೂರ್ಯ್ಯಂ ಬಾಧಿಪ್ಪ] ಕಲಿಗೆ ಕಲಿಯುಗ ವಿಪರೀತನ್ಮಾ[ಧವನೀತನ್ಪೆರನಲ್ಲ]
೩. ಕಟ್ಟಿದ [ಸಿಂಘಮನ್ಕೆಟ್ಟೊಡೇನಮಗೆನ್ದು] ಬಿಟ್ಟವೋಲ್ಕಲಿಗೆ ವಿಪರೀತಂಗಹಿತರ್ಕಳ್ಕೆ[ಟ್ಟರ್ ಮೇಣ್ಸತ್ತರ ವಿಚಾರಮ್]
ಸಿಡಿಲಫಡಿಯ ಕಪ್ಪೆ ಅರಭಟ್ಟನ ಶಾಸನವು ತಟ್ಟುಕೋಟೆ ಶಾಸನಕ್ಕಿಂತಲೂ ಸ್ವಲ್ಪ ಹಿಂದಿನದು ಎಂದು ಊಹಿಸಲಾಗಿದೆ. ಆದ್ದರಿಂದ ಮೊದಲಿಗೆ ಸಿಡಿಲಫಡಿಯಲ್ಲಿ ಕೆತ್ತಲಾಗಿದ್ದ ಶಾಸನವನ್ನು ನಂತರ ತಟ್ಟುಕೋಟೆಯ ಬಂಡೆಯ ಮೇಲೆ ಕಲಾತ್ಮಕವಾಗಿ ಪದ್ಮಪೀಠದ ಮೇಲಿನ ಸುದರ್ಶನ ಚಕ್ರದ ಮೇಲ್ಭಾಗದಲ್ಲಿ ಅಂದವಾಗಿ ಕೊರೆಯಲಾಗಿದೆ ಎಂದು ಭಾವಿಸಲಾಗಿದೆ. ಈ ಶಾಸನದ ಎದುರು ಭಾಗದಲ್ಲಿ ಶ್ರೀ ದಾಮೋದರನ್ ಎಂಬ ಬರಹವಿದ್ದು, ಬಹುಶಃ ಇವನೇ ಶಾಸನವನ್ನು ಕಲ್ಲಿನ ಮೇಲೆ ಕೆತ್ತಿದವನು ಎಂದು ಊಹಿಸಲಾಗಿದೆ. ಈ ಸ್ಥಳದಲ್ಲೇ ಸತ್ಯಾಶ್ರಯ ಶ್ರೀ ಎಂಬ ಹೆಚ್ಚು ಸವೆದ ಶಾಸನವೂ ಇದೆ.
ಮೊದಲಿಗೆ ಸಿಡಿಲಫಡಿಯ ಭಾಗದಲ್ಲಿದ್ದ ಕಪ್ಪೆ ಅರಭಟ್ಟ ಎಂಬ ಅಂಕಿತನಾಮ ಅಥವಾ ರೂಢನಾಮದ ವ್ಯಕ್ತಿಯ ನೆನಪಿಗಾಗಿ ತಟ್ಟುಕೋಟೆಯ ಬಂಡೆ ಮೇಲೆ ನಂತರ ಶಾಸನವನ್ನು ಬರೆಸಿರುವ ಸಾಧ್ಯತೆಗಳಿವೆ. ಈ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ಆಗಬೇಕಿದೆ.  ಡಾ|| ಎಚ್.ಎಸ್.ಗೋಪಾಲ ರಾವ್ ಅವರು ನಡೆಸಿದ ಶಾಸನ ಶೋಧದ ಸಂದರ್ಭದಲ್ಲಿ ಬಾದಾಮಿಯ ಡಾ|| ಶೀಲಾಕಾಂತ ಪತ್ತಾರ, ಬಾಚಿನಗುಡ್ಡದ ಯಮನಪ್ಪ ಅಡಿಯಪ್ಪ ಹಳಿಗೇರಿ ಮತ್ತು ಶಿರಬಾಡಗಿಯ ನಾರಾಯಣ ಈಶ್ವರಪ್ಪ ಬಡಿಗೇರ್ ಅವರು ನೀಡಿದ ನೆರವನ್ನು ಕೃತಜ್ಞತೆಯಿಂದ ಸ್ಮರಿಸುತ್ತಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ