ಸೋಮವಾರ, ಡಿಸೆಂಬರ್ 6, 2010

ಪಂಪನ ಯುಗ (ಭಾಗ-೨: ಚಾವುಂಡರಾಯ ಮತ್ತು ನಾಗವರ್ಮ)

ಚಾವುಂಡರಾಯ:
·         ರನ್ನನ ಕಾಲದಲ್ಲಿಯೇ ಚಾವುಂಡರಾಯನು ಜೈನ ತೀರ್ಥಂಕರ ಚರಿತ್ರೆಯನ್ನು ಒಳಗೊಂಡ ಗದ್ಯಗ್ರಂಥ ಚಾವುಂಡರಾಯ ಪುರಾಣವನ್ನು ಬರೆದನು.
·         ಕನ್ನಡದ ಮೊಟ್ಟಮೊದಲ ಗದ್ಯಗ್ರಂಥ ಶಿವಕೋಟ್ಯಾಚಾರ್ಯವೊಡ್ದಾರಾಧನೆಯ ಗದ್ಯವು ಚಾವುಂಡರಾಯ ಪುರಾಣದ ಗದ್ಯಕ್ಕಿಂತ ಉತ್ಕೃಷ್ಟವಾಗಿದೆ ಎಂದು ಶ್ರೀ ಕೆ.ವೆಂಕಟರಾಮಪ್ಪನವರು ಹೇಳುತ್ತಾರೆ.
·         ಜಿನಸೇನ ಮತ್ತು ಗುಣಭದ್ರ ಕವಿಗಳು ಸಂಸ್ಕೃತದಲ್ಲಿ ಬರೆದಿರುವ ಮಹಾಪುರಾಣ ಅಥವಾ ತ್ರಿಷಷ್ಟಿಶಲಾಕಾಪುರುಷ ಪುರಾಣ ಗ್ರಂಥದ ಆಧಾರದಿಂದ ರನ್ನನ ಪೋಷಕ ಚಾವುಂಡರಾಯನು ತನ್ನ ಕೃತಿಯನ್ನು ಕನ್ನಡದಲ್ಲಿ ಬರೆದನು.
·         ಚಾವುಂಡರಾಯ ಗಂಗವಾಡಿಯ ಮಾಂಡಲಿಕರಾಗಿದ್ದ ಮಾರಸಿಂಹ, ನಾಲ್ವಡಿ ರಾಚಮಲ್ಲ ಮತ್ತು ಗಂಗ ರಾಚಮಲ್ಲರ ಆಳ್ವಿಕೆಗಳಲ್ಲಿ ಕ್ರಿ.ಶ.ಸುಮಾರು ೯೬೧ರಿಂದ ೯೮೪ರವರೆಗೆ ದಂಡನಾಯಕನೂ ಮಂತ್ರಿಯೂ ಆಗಿದ್ದಂತೆ ತೋರುತ್ತದೆ.
·         ಶ್ರವಣಬೆಳಗೊಳದ ಗೊಮ್ಮಟೇಶ್ವರ ಶಿಲ್ಪವನ್ನು ಮಾಡಿಸಿದ್ದಕ್ಕಾಗಿ ರಾಚಮಲ್ಲನು ಚಾವುಂಡರಾಯನಿಗೆ ರಾಯ ಬಿರುದನ್ನು ಕೊಟ್ಟನಂತೆ.

ನಾಗವರ್ಮ:
·         ನಾಗವರ್ಮನು ಛಂಧೋಂಬುಧಿ ಮತ್ತು ಕಾದಂಬರಿ ಎಂಬ ಎರಡು ಗ್ರಂಥಗಳನ್ನು ಬರೆದನು.
·         ಕಾದಂಬರಿಯು ಬಾಣಭಟ್ಟನ ಸಂಸ್ಕೃತ ಕಾದಂಬರಿಯ ಅನುವಾದ. ಗದ್ಯಪದ್ಯ ಮಿಶ್ರಿತ ಚಂಪೂ ರೂಪದಲ್ಲಿ ಬರೆದನು.
·         ಕಾದಂಬರಿ ಕಾವ್ಯದಲ್ಲಿ ಪುಂಡರೀಕ-ಮಹಾಶ್ವೇತೆಯರ ಪ್ರಣಯಕಥೆಯೂ, ಕಾದಂಬರೀ-ಚಂದ್ರಪೀಡಾರ ಪ್ರಣಯಕಥೆಯೂ ಸೇರಿಕೊಂಡು ಒಂದು ಕಥೆಯಾಗಿದೆ.
·         ಕಾದಂಬರೀ, ಮಹಾಶ್ವೇತೆಯರು ಅಪ್ಸರ ಸ್ತ್ರೀಯರು. ಅವರು ಒಲಿದ ಚಂದ್ರಪೀಡಾ, ಪುಂಡರೀಕರು ದೈವಾಂಶಸಂಭೂತರಾದರೂ ಮಾನವರು. ಇವರಿಬ್ಬರೂ ಶಾಪದಿಂದ ಜನ್ಮಾಂತರಗಳನ್ನು ಪಡೆಯುತ್ತಾರೆ. ಎರಡು ಜನ್ಮಗಳ ನಂತರ ಅವರು ಕಾದಂಬರೀ ಮಹಾಶ್ವೇತೆಯರನ್ನು ಸೇರುತ್ತಾರೆ.
·         ಕಥೆಯನ್ನು ಕವಿ ಹೇಳದೆ ಅದರ ಬಹುಭಾಗವನ್ನು ಬೇರೆ ಬೇರೆ ಪಾತ್ರಗಳಿಂದ ಹೇಳಿಸುತ್ತಾನೆ. ಕಥೆಯ ಆರಂಭ ಅಂತ್ಯಗಳನ್ನು ಮಾತ್ರ ಕವಿ ಹೇಳುತ್ತಾನೆ. ಅಲ್ಲದೆ ಕಥೆಯನ್ನು ಮೊದಲಿನಿಂದ ಹೇಳದೆ ಮಧ್ಯದಿಂದ ಆರಂಭಿಸುತ್ತಾನೆ.
·         ಕಾದಂಬರಿಯ ಕಥೆ ತೊಡಕಾಗಿದ್ದು, ಕಥೆಗಿಂತ ವರ್ಣನೆಯೇ ಹೆಚ್ಚೆಂದು ಹೇಳಬಹುದು.

ಬುಧವಾರ, ಡಿಸೆಂಬರ್ 1, 2010

ಪಂಪನ ಯುಗ (ಭಾಗ-೧: ಪಂಪ ಹಾಗೂ ರನ್ನ)

·         ಪಂಪ ಹುಟ್ಟಿದ್ದು ಶಾಲಿವಾಹನ ಶಕೆ ೮೨೪ರ ದುಂದುಭಿ ಸಂವತ್ಸರದಲ್ಲಿ. ಇದು ಕ್ರಿ.ಶ.೯೦೨-೦೩ಕ್ಕೆ ಸರಿಯಾಗುತ್ತದೆ.
·         ಮಹತ್ವದ ಕುರಿಕ್ಯಾಲ ಅಥವಾ ಕುರ್ಕ್ಯಾಲ್ ಶಾಸನದ ಆಧಾರದಿಂದ ಪಂಪನ ಜನನ ತನ್ನ ತಾಯಿಯ ತವರುಮನೆಯಾಗಿದ್ದ ಅಣ್ಣಿಗೇರಿಯಲ್ಲಿ ಆಗಿರಬಹುದೆಂದು ಊಹಿಸಲಾಗಿದೆ.
·         ಪಂಪನ ಜನನ-ಬಾಲ್ಯ-ಯೌವನಗಳಿಗೆ ಈಗಿನ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಗಳ ಪ್ರದೇಶ ತೂಗುತೊಟ್ಟಿಲಾಗಿರಬೇಕು.
·         ಶಸ್ತ್ರ-ಶಾಸ್ತ್ರಗಳ ವಿದ್ಯಾಭ್ಯಾಸವೂ ಇಲ್ಲಿಯೇ ನಡೆದಿರಬೇಕು.
·         ಪಂಪನ ಬಾಲ್ಯ-ಯೌವನಗಳು ಬನವಾಸಿ/ಬೆಳ್ವೊಲ ಪ್ರಾಂತದಲ್ಲಿಯೂ, ಕ್ರಿಯಾಶೀಲವಾದ ವೃತ್ತಿ-ಸಾಹಿತ್ಯಿಕ ಜೀವನವು ಸಬ್ಬಿನಾಡಿನಲ್ಲಿಯೂ (ಈಗಿನ ಆಂದ್ರ ಪ್ರದೇಶದ ಬೋದನ-ವೇಮುಲವಾಡ ಪ್ರದೇಶ) ಜರುಗಿರುವುದು ಸ್ಪಷ್ಟವಾಗಿದೆ.
·         ಪಂಪಭಾರತ ಅಥವಾ ವಿಕ್ರಮಾರ್ಜುನ ವಿಜಯ ಕಾವ್ಯದಲ್ಲಿ ಧಾರವಾಡ-ಉತ್ತರ ಕನ್ನಡ ಸೀಮೆಯ ಗೋಕರ್ಣನಾಥನನ್ನು, ವನವಾಸಿ/ಬನವಾಸಿ ದೇಶವನ್ನು ಪ್ರೀತಿಯಿಂದ ನೆನೆಯುತ್ತಾನೆ.
·         ವರದಾ ನದಿಯ ಪ್ರಸ್ತಾಪದ ಜೊತೆಗೆ ಪುಲಿಗೆರೆಯ ತಿರುಳ್ಗನ್ನಡವನ್ನೂ ಹೇಳುತ್ತಾನೆ. ಈಗಿನ ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಲಕ್ಷ್ಮೇಶ್ವರವೇ ಆ ಪುಲಿಗೆರೆ.
·         ಪಂಪನ ತಂದೆ ಅಭಿರಾಮದೇವರಾಯ ಅಥವಾ ಜಿನವಲ್ಲಭ ಜಾತಿಯೊಳೆಲ್ಲಮುತ್ತಮದ ಜಾತಿಯ ವಿಪ್ರಕುಲಂಗೆ ನಂಬಲೇ ಮಾತೊ ಜಿನೇಂದ್ರಧರ್ಮವೆ ವಲಂ ದೊರೆ ಧರ್ಮದೊಳೆಂದು ನಂಬಿ ಜೈನ ಧರ್ಮವನ್ನು ಸ್ವೀಕರಿಸಿದನಂತೆ.
·         ಶಾಲಿವಾಹನ ಶಕೆ ೮೬೩ರ ಪ್ಲವನಾಮ ಸಂವತ್ಸರದಲ್ಲಿ ಅಂದರೆ ಕ್ರಿ.ಶ.೯೪೧-೪೨ಕ್ಕೆ ಹೊಂದುವ ಕಾಲದಲ್ಲಿ ಪಂಪ ಆದಿಪುರಾಣವನ್ನು ರಚಿಸಿದನು. ಆಗ ಪಂಪನಿಗೆ ೪೦ ವರ್ಷ ವಯಸ್ಸು.
·         ಆದಿಪುರಾಣವನ್ನು ಕ್ರಿ.ಶ.೯೪೨ರಲ್ಲಿ ಕೇವಲ ೩ ತಿಂಗಳ ಅವಧಿಯೊಳಗೆ ರಚಿಸಿದ ಮೇಲೆ ಅರಿಕೇಸರಿಯ ಕೋರಿಕೆಯಂತೆ ಪಂಪಭಾರತವನ್ನು ರಚಿಸಿರಬೇಕು.
·         ವೇಮುಲವಾಡ ಶಾಸನದ ಕಾಲದಿಂದ ಪಂಪ ಅರಿಕೇಸರಿಯ ಆಸ್ಥಾನವನ್ನು ತನ್ನ ೨೦-೨೫ರ ಹರೆಯದಲ್ಲಿ ಸೇರಿರುವುದು ಸಾಧ್ಯವೆಂದು ಹೇಳಬಹುದು.
·         ತನಗೆ ಆಶ್ರಯದಾತನಾದ ಅರಿಕೇಸರಿಯ ಚಾರಿತ್ರ್ಯವನ್ನು ಮೆಚ್ಚಿ ಪಂಪ ಅವನನ್ನು ಅರ್ಜುನನಿಗೆ ಹೋಲಿಸಿರುವನು. ಆದ್ದರಿಂದಲೇ ಕಾವ್ಯಕ್ಕೆ ವಿಕ್ರಮಾರ್ಜುನ ವಿಜಯ ಎಂದು ಹೆಸರಿಟ್ಟನು.
ಪಂಪನ ಕಥಾ ಸಂವಿಧಾನದಲ್ಲಿ ಹಲವಾರು ವ್ಯತ್ಯಾಸಗಳಿವೆ.
·         ಅವನ ಪ್ರಕಾರ ಪಾಂಚಾಲಿ ಪಂಚವಲ್ಲಭೆಯಲ್ಲ; ಅವಳು ಕೇವಲ ಅರ್ಜುನನೊಬ್ಬನ ಮಡದಿ.
·         ಪಂಪಭಾರತದಲ್ಲಿ ಕೃಷ್ಣನಿಗೆ ಹೆಚ್ಚು ಪ್ರಾಧಾನ್ಯವಿಲ್ಲ. ಕೃಷ್ಣ ಮಹಾ ಬುದ್ಧಿಶಾಲಿ, ಪಾಂಡವರ ಪರಮಮಿತ್ರ. ಆದರೂ ಭಾರತದ ಸೂತ್ರಧಾರನಲ್ಲ.
·         ಕಾವ್ಯದ ಕೊನೆಯಲ್ಲಿ ಮಹಾಭಾರತದ ಪ್ರಧಾನ ನಾಯಕರನ್ನು ಅವರ ಮುಖ್ಯ ಗುಣಗಳನ್ನೂ ಛಲದೊಳ್ ದುರ್ಯೋಧನಂ, ನನ್ನಿಯೊಳಿನತನಯಂ, ಗಂಡಿನೊಳ್ ಭೀಮಸೇನಂ, ಬಲದೊಳ್ ಮದ್ರೇಶನತ್ಯುನ್ನತಿಯೊಳಮರಸಿಂಧೂದ್ಭವಂ, ಚಾಪವಿದ್ಯಾ ಬಲದೊಳ್ ಕುಂಭೋದ್ಭವಂ, ಸಾಹಸದ ಮಹಿಮೆಯೊಳ್ ಫಲ್ಗುಣಂ, ಧರ್ಮದೊಳ್ ನಿರ್ಮಲಚಿತ್ತಂಧರ್ಮಪುತ್ರಂ, ಮಿಗಿಲಿವರ್ಗಳಿನೀ ಭಾರತಂ ಲೋಕಪೂಜ್ಯಂ ಎಂದು ಹೇಳುವಾಗ ಪಂಪ ಕೃಷ್ಣನನ್ನು ಸಂಪೂರ್ಣವಾಗಿ ಮರೆತೇ ಬಿಟ್ಟಿದ್ದಾನೆ.
·         ಹಲವು ವ್ಯತ್ಯಾಸಗಳನ್ನು ಮಾಡಿದರೂ ಪಂಪ ತನ್ನ ಭಾರತದಲ್ಲಿ ಬಹಳಮಟ್ಟಿಗೆ ವ್ಯಾಸಭಾರತವನ್ನೇ ಅನುಸರಿಸಿದ್ದಾನೆ.
ಪಂಪ ವಿಶಾಲ ಹೃದಯದ ಮಹಾಕವಿ. ಅವನು ಎಲ್ಲ ಪಾತ್ರಗಳ ಘನತೆಯನ್ನು ಚೆನ್ನಾಗಿ ನಿರೂಪಿಸಿದ್ದಾನೆ. ಅರ್ಜುನನ ಪರಾಕ್ರಮವನ್ನು ವರ್ಣಿಸುವುದೇ ಕವಿಯ ಮುಖ್ಯ ಉದ್ದೇಶವಾದರೂ ಇತರ ಪಾತ್ರಗಳ ಘನತೆಗೆ ಕುಂದು ತಂದಿಲ್ಲ. ಕರ್ಣ ತ್ಯಾಗಶೌರ್ಯಗಳ ವರ್ಣನೆ ಹಾಗೂ ದುರ್ಯೋಧನ ಅಭಿಮಾನದ ಮಾತುಗಳು ನಿಜಕ್ಕೂ ಅದ್ಭುತ.
ಪಂಪನ ಕಲ್ಪನಾ ಸಾಮರ್ಥ್ಯ ಅಗಾಧವಾದುದು. ದುಶ್ಶಾಸನನ ವಧೆಯ ನಂತರ ಭೀಮ ದ್ರೌಪದಿಯೊಡನೆ ಹೇಳುವ ಮಾತುಗಳು ಸ್ವಾರಸ್ಯವಾಗಿವೆ.
ಇದರೊಳ್ ಶ್ವೇತಾತಪತ್ರಸ್ಥಗಿತದಶದಿಶಾಮಂಡಲಂ ರಾಜಚಕ್ರಂ
ಪುದಿದಳ್ಕೌಡಿತ್ತಡಂಗಿತ್ತಿದರೊಳೆ ಕುರುರಾಜಾನ್ವಯಂ ಮತ್ಪ್ರತಾಪ
ಕ್ಕಿದರಿಂದಂ ನೋಡಗುರ್ವುರ್ವಿದುದಿದುವೆ ಮಹಾಭಾರತಕ್ಕಾದಿಯಾಯ್ತು
ಬ್ಜದಳಾಕ್ಷೀ ಪೇಳ ಸಾಮಾನ್ಯಮೆ ಬಗೆಯೆ ಭವತ್ಕೇಶಪಾಶಪ್ರಪಂಚಂ ||
(ದ್ರೌಪದಿಯ ಕೇಶಪಾಶವೇ ಒಂದು ಪ್ರಪಂಚ. ಅದರಲ್ಲಿ ದಶದಿಕ್ಕುಗಳ ದೊರೆಗಳೂ ಅಡಗಿ ಹೋದರು. ಕೌರವ ವಂಶವೇ ಅದರಲ್ಲಿ ಕೊನೆಗೊಂಡಿತು. ಎಲ್ಲಕ್ಕಿಂತ ಮುಖ್ಯವಾಗಿ ಅದು ಮಹಾಭಾರತಕ್ಕೆ ಆದಿಯಾಯಿತು. ಮಹಾಭಾರತದ ಯುದ್ಧಕ್ಕೆ ಮೂಲಕಾರಣ ದ್ರೌಪದಿಗೆ ಕೌರವರಿಂದ ಆದ ಅಪಮಾನ.)
ಪಂಪ ಮಿತಭಾಷಿ. ಅನಾವಶ್ಯಕವಾಗಿ ಎಂದೂ ಪದಪ್ರಯೋಗ ಮಾಡುವವನಲ್ಲ.
·         ದೊರೆಯ ಸಂತೋಷಕ್ಕಾಗಿ ವಿಕ್ರಮಾರ್ಜುನ ವಿಜಯವನ್ನು ಬರೆದ ಪಂಪ ತನ್ನ ಆತ್ಮ ಸಂತೋಷಕ್ಕಾಗಿ ಆದಿಪುರಾಣವನ್ನು ಬರೆದನು.
·         ಜೈನಮತ ಪ್ರಚಾರಕರಲ್ಲಿ ಪ್ರಮುಖರಾದವರನ್ನು ಪ್ರಧಾನರಾದವರನ್ನು ತೀರ್ಥಂಕರರೆಂದು ಕರೆಯುತ್ತಾರೆ.
·         ಆದಿಪುರಾಣ ಮೊದಲ ತೀರ್ಥಂಕರನಾದ ವೃಷಭನಾಥನ ಜೀವನಕಥೆ. ಈ ಕಥೆಯು ಸಂಸ್ಕೃತದಲ್ಲಿ ಜಿನಸೇನನ ಪೂರ್ವಪುರಾಣ ಮೊದಲಾದ ಗ್ರಂಥಗಳಲ್ಲಿ ನಿರೂಪಿತವಾಗಿದೆ.
·         ಆದಿಪುರಾಣದಲ್ಲಿ ಕಲ್ಪನಾಶಕ್ತಿಗೂ ಕಥನಕೌಶಲಕ್ಕೂ ಹೆಚ್ಚು ಅವಕಾಶವಿಲ್ಲ.
·         ಇದು ಪುರಾಣಕಥೆಯಾದ್ದರಿಂದ ಸಂಪ್ರದಾಯಾನುಸಾರವಾದ ರೀತಿಯಲ್ಲಿಯೇ ಹೇಳಬೇಕು.
·         ಅದರಂತೆ ಪಂಪ ಕಾವ್ಯಾರಂಭದಲ್ಲಿ ಪುರಾಣ ಲಕ್ಷಣಗಳನ್ನು ನಿರೂಪಿಸಿ ಲೋಕಾಕಾರ ಮೊದಲಾದುವುಗಳನ್ನು ಹೇಳಿ ತೀರ್ಥಂಕರನ ಹಿಂದಿನ ಜನ್ಮಗಳ ಕಥೆಯನ್ನು ಆರಂಭಿಸುತ್ತಾನೆ.
·         ನೀರಸವಾದ ಜನ್ಮಾಂತರ ಕಥೆಗಳಿಂದ ತುಂಬಿದ್ದರೂ ಪಂಪನ ಅಗಾಧ ರಚನಾ ಶಕ್ತಿಯಿಂದ ಈ ಕಾವ್ಯವು ಎಲ್ಲರಿಗೂ ಮೆಚ್ಚುಗೆಯಾಗುತ್ತದೆ.
·         ಗ್ರಂಥದ ಕೊನೆಯ ಭಾಗದಲ್ಲಿ ಬರುವ ಭರತ-ಬಾಹುಬಲಿಗಳ ಕಥೆ ಬಹಳ ಸ್ವಾರಸ್ಯವಾಗಿದೆ.
ರನ್ನ, ದುರ್ಗಸಿಂಹ, ನಯಸೇನ, ನಾಗವರ್ಮ, ಅಗ್ಗಳ, ಜನ್ನ, ಕಮಲಭವ ಮೊದಲಾದ ಕನ್ನಡ ಕವಿಗಳು ಪಂಪನನ್ನು ಮೆಚ್ಚಿಕೊಂಡಿದ್ದಾರೆ, ಅನುಸರಿಸಿದ್ದಾರೆ.
ರನ್ನ:
·         ಪಂಪನ ತರುವಾಯ ರನ್ನ ಮುಖ್ಯ ಕವಿ.
·         ಈತ ಸುಮಾರು ಕ್ರಿ.ಶ.೯೯೩ರಲ್ಲಿ ಬದುಕಿದ್ದವನು.
·         ಜಾತಿಯಲ್ಲಿ ವೈಶ್ಯ, ವೃತ್ತಿಯಲ್ಲಿ ಬಳೆಗಾರ, ಧರ್ಮದಲ್ಲಿ ಜೈನ.
·         ಸಂಸ್ಕೃತ-ಕನ್ನಡ ಭಾಷೆಗಳಲ್ಲಿ ಉದ್ದಾಮ ಪಾಂಡಿತ್ಯವನ್ನು ಸಂಪಾದಿಸಿ ಶ್ರೇಷ್ಠ ಗ್ರಂಥಗಳನ್ನೂ ರಚಿಸಿದನು.
·         ಅಜಿತತೀರ್ಥಂಕರ ಪುರಾಣ ಹಾಗೂ ಸಾಹಸಭೀಮ ವಿಜಯಗಳು ರನ್ನನ ದೊರೆತಿರುವ ಕಾವ್ಯಗಳು. ಇವನೇ ಬರೆದಿರುವನೆಂದು ತಿಳಿಯಲಾಗಿರುವ ಪರಶುರಾಮ ಚರಿತ ಹಾಗೂ ಚಕ್ರೇಶ್ವರ ಚರಿತಗಳು ಇನ್ನೂ ಸಿಕ್ಕಿಲ್ಲ.
ಪಂಪನಿಗೆ ನಮ್ರತೆ ಹೆಚ್ಚು. ರನ್ನನಿಗೆ ಆತ್ಮಪ್ರತ್ಯಯ ಬಹಳ. ತನ್ನ ಕವಿತಾಶಕ್ತಿಯನ್ನು ತಾನೇ ವಿಶೇಷವಾಗಿ ಹೊಗಳಿಕೊಂಡಿದ್ದಾನೆ:
ರತ್ನಪರೀಕ್ಷಕನಾಂ ಕೃತಿ
ರತ್ನಪರೀಕ್ಷಕನೆಂದು ಫಣಿಪತಿಯ ಫಣಾ
ರತ್ನಮುಮಂ ರನ್ನನ ಕೃತಿ
ರತ್ನಮುಮಂ ಪೇಳ್ ಪರೀಕ್ಷಿಪಂಗೆಂಟೆರ್ದೆಯೇ ||
ತಾನು ಸರಸ್ವತಿಯ ಭಂಡಾರದ ಮುದ್ರೆಯನ್ನೊಡೆದು ಬಿಟ್ಟನಂತೆ:
ಆರಾತೀಯಕವೀಶ್ವರ
ರಾರುಂ ಮುನ್ನಾರ್ತರಿಲ್ಲ ವಾಗ್ದೇವಿಯ ಭಂ
ಡಾರದ ಮುದ್ರೆಯನೊಡೆದಂ
ಸಾರಸ್ವತಮೆನಿಪ ಕವಿತೆಯೊಳ್  ಕವಿರತ್ನಂ ||
ರನ್ನ ತನ್ನನ್ನು ವಿಶೇಷವಾಗಿ ಹೊಗಳಿಕೊಂಡಿದ್ದರೂ ಇದು ಒಣಜಂಭದ, ದುರಭಿಮಾನದ, ಪೊಳ್ಳು ಮಾತಲ್ಲ. ನಿಜವಾಗಿಯೂ ರನ್ನ ಕವಿರತ್ನನೇ ಸರಿ.
ರನ್ನ ಪಂಪನಂತೆ ಒಂದು ಧಾರ್ಮಿಕ ಕಾವ್ಯವನ್ನು ಹಾಗೂ ಒಂದು ಲೌಕಿಕ ಕಾವ್ಯವನ್ನು ಬರೆದಿದ್ದಾನೆ.
ಅಜಿತ ತೀರ್ಥಂಕರ ಪುರಾಣ :
·         ಅಜಿತ ತೀರ್ಥಂಕರ ಪುರಾಣ ರನ್ನನ ಧಾರ್ಮಿಕ ಕಾವ್ಯ.
·         ಇದು ಎರಡನೆಯ ತೀರ್ಥಂಕರನಾದ ಅಜಿತನಾಥನ ಜೀವನ ವೃತ್ತಾಂತ.
·         ಈ ಗ್ರಂಥವನ್ನು ದಾನಚಿಂತಾಮಣಿ ಅತ್ತಿಮಬ್ಬೆಯ ಪ್ರಾರ್ಥನೆಯಂತೆ ಬರೆದನೆಂದು ತಿಳಿಯಲಾಗಿದೆ. ಅತ್ತಿಮಬ್ಬೆಯನ್ನು ಕೃತಿಯ ಕೊನೆಯಲ್ಲಿ ಪರಿಪರಿಯಾಗಿ ಹೊಗಳಿದ್ದಾನೆ.
·         ಜೈನಪುರಾಣ ಕಥೆಗಳಲ್ಲಿ ಕವಿಯು ಹೆಚ್ಚು ಸ್ವಾತಂತ್ರ್ಯ ವಹಿಸಲು ಸಾಧ್ಯವಿಲ್ಲ.
·         ಪ್ರತಿ ತೀರ್ಥಂಕರನಿಗೂ ಪಂಚಮಹಾಕಲ್ಯಾಣಗಳು ನಡೆಯುತ್ತವೆ. ಅವುಗಳನ್ನು ಕವಿಯು ವರ್ಣಿಸಲೇಬೇಕು. ಅವುಗಳ ವರ್ಣನೆಯಲ್ಲಿ ವ್ಯತ್ಯಾಸಗಳನ್ನು ಕಾಣಬಹುದು. ತೀರ್ಥಂಕರನ ಹೆಸರು, ಬಣ್ಣ, ಎತ್ತರ ಮುಂತಾದುವುಗಳಲ್ಲಿ ವ್ಯತ್ಯಾಸ ಕಾಣಬಹುದು. ಆದರೆ ಕಥಾಸರಣಿಯಲ್ಲಿ ಏನೂ ಭೇದವಿಲ್ಲ.
·         ರನ್ನನ ಅಜಿತನಾಥ ಪುರಾಣದಲ್ಲಿ ಅವನ ಕವಿತಾ ಚಾತುರ್ಯವು ತಕ್ಕಮಟ್ಟಿಗೆ ವ್ಯಕ್ತವಾಗಿದೆ. ದೇಹಾನಿತ್ಯತೆಯನ್ನು ನಿರೂಪಿಸುವ ವೈರಾಗ್ಯಬೋಧಕವಾದ ಪದ್ಯಗಳು ಬಹಳ ಚೆನ್ನಾಗಿವೆ.
ಸಾಹಸಭೀಮ ವಿಜಯ ಅಥವಾ ಗದಾಯುದ್ಧ :
·         ರನ್ನನ ಸಂಪೂರ್ಣ ಘನತೆ ವ್ಯಕ್ತವಾಗುವುದು ಅವನ ಸಾಹಸಭೀಮ ವಿಜಯದಲ್ಲಿ.
·         ಪಂಪಭಾರತವನ್ನು ಓದಿ ಸಂತೋಷಪಟ್ಟು ಅದರ ೧೩ನೆಯ ಆಶ್ವಾಸವನ್ನು ಆರಿಸಿಕೊಂಡು ರನ್ನ ಅದನ್ನೇ ಸ್ವತಂತ್ರ, ದೀರ್ಘ ಕಾವ್ಯವನ್ನಾಗಿ ಮಾಡಿದ್ದಾನೆ.
·         ರನ್ನನ ಗದಾಯುದ್ಧಕ್ಕೆ ಭೀಮನೇ ನಾಯಕ. ಆದ್ದರಿಂದಲೇ ಈ ಕಾವ್ಯಕ್ಕೆ ಸಾಹಸಭೀಮ ವಿಜಯ ಎಂಬ ಹೆಸರು.
ದುರ್ಯೋಧನ ಅಡಗಿದ್ದ ವೈಶಂಪಾಯನ ಸರೋವರದ ಬಳಿಗೆ ಹೋಗಿ ಅರ್ಜುನಾದಿಗಳು ಮೂದಲಿಸಿದಾಗ ಕೌರವ ರೋಷಗೊಳ್ಳುವುದಿಲ್ಲ. ಆದರೆ ಭೀಮ ಬಂದು ನಿಂತು,
ಜಲದೊಳ್ ಮೀನಿರ್ಪವೊಲ್ ನೀಂ ಕೊಳದೊಳೆ ಮುಳುಗಿರ್ದಕ್ಕಟಾ ಕೋಡ ಸೇಡಿಂ
ಗೊಳಗಾದಯ್ ನಿನ್ನ ದುರ್ಯೋಧನವೆಸರ್ಗಿದು ಲಜ್ಜಾಕರಂ ತೋರಿದಯ್ ನಿ
ನ್ನಳವಂ ಚಿಹ್ ಸತ್ತರೇಂ ಪುಟ್ಟರೆ ಪೋರಮಡು ನೀಂ ಕೈದುಗೊಳ್ ಕೌರವೇಂದ್ರಾ
ಚಳವಜ್ರಂ ಬಂದನೀಗಳ್ ಕುರಕುಲಮಥನೋದ್ಭೀಕರಂ ಭೀಮಸೇನಂ ||
ಎಂದು ಮೂದಲಿಸಿದಾಗ ಕೌರವನ ರೋಷ ಮಿತಿ ಮೀರುವುದು. ನೀರೊಳಗಿರ್ದುಂ ಬೆಮರ್ತನುರಗಪತಾಕಂ ಎಂದು ಕವಿಯು ಅವನ ಕೋಪದ ಅಧಿಕ್ಯವನ್ನು ಶಕ್ತಿಯುತವಾಗಿ ವರ್ಣಿಸಿದ್ದಾನೆ.
ರನ್ನನ ದುರ್ಯೋಧನ ಪುರುಷಕಾರದಿಂದ ಯುದ್ಧ ಮಾಡಿ ಹಲವು ದುಃಖಗಳನ್ನು ಅನುಭವಿಸಿ ಕೊನೆಗೆ ಪರಿಶುದ್ಧಾಂತಃಕರಣ ಆಗುವನು. ದೈವದ ಮಹಿಮೆಯನ್ನು ಅರಿತುಕೊಳ್ಳುವನು. ಒಂದು ದೃಷ್ಟಿಯಿಂದ ಈ ಕಾವ್ಯಕ್ಕೆ ದುರ್ಯೋಧನನೇ ನಾಯಕ ಎನಿಸುವನು.
ಗದಾಯುದ್ಧದಲ್ಲಿ ರನ್ನ ಸಿಂಹಾವಲೋಕನ ಕ್ರಮದಿಂದ ಇಡೀ ಮಹಾಭಾರತ ಕಥೆಯನ್ನು ಹೇಳಿದ್ದಾನೆ.
ರನ್ನನ ರಸಪ್ರತಿಪಾದನೆ, ಶೈಲಿ, ಪಾತ್ರಪೋಷಣೆ, ಔಚಿತ್ಯಜ್ಞಾನಗಳು ಅನ್ಯಾದೃಶವಾದುವು. ಅರ್ಥೋಚಿತವಾದ ಪದಪ್ರಯೋಗ ರನ್ನನ ಒಡವೆ. ಅವನದು ವೀರ್ಯವತ್ತಾದ ಶೈಲಿ.
ರನ್ನನ ಯೋಗ್ಯತೆಯನ್ನು ಒಂದು ಮಾತಿನಲ್ಲಿ ಹೇಳುವುದಾದರೆ:
ನೆಗಳ್ದ ಕವಿರತ್ನನಂತೊಳ
ಪುಗುವುದು ಮೊಗ್ಗಾಯ್ತೆ ಜಿನಮತಾಂಭೋಧಿಯುಮಂ
ಪುಗದಾಗಮಮರಿವರ ಬಗೆ
ವುಗದೆ ಕೆಲರ್ ಕವಿಗಳಾಡಿದರ್ ತಡಿತಡಿಯೊಳ್ ||