ಶುಕ್ರವಾರ, ನವೆಂಬರ್ 26, 2010

ಕನ್ನಡ ಸಾಹಿತ್ಯದ ಆರಂಭ ಕಾಲ

ಕನ್ನಡ ಭಾಷೆಯ ಇತಿಹಾಸ ಇಂದು ನೆನ್ನೆಯದಲ್ಲ. ಕನ್ನಡದಲ್ಲಿ ಕಾವ್ಯರಚನೆಯ ನಿರ್ದಿಷ್ಟ ಕಾಲವನ್ನು ನಿರ್ಧರಿಸುವುದು ಕಷ್ಟದ ಕೆಲಸ. ೯ನೆಯ ಶತಮಾನಕ್ಕಿಂತ ಹಿಂದಿನ ಕೃತಿಯಾವುದೂ ದೊರಕದಿರುವುದು ಶೋಧನೆಗೆ ಇನ್ನೂ ಅವಕಾಶ ಇದೆಯೆಂದು ಸೂಚಿಸುತ್ತದೆ. ಕನ್ನಡ ಭಾಷೆಯೂ, ಅದರ ಸಾಹಿತ್ಯವೂ ೯ನೆಯ ಶತಮಾನಕ್ಕಿಂತ ಮುಂಚೆ ಇದ್ದವು ಎಂಬುದನ್ನು ಕನ್ನಡದಲ್ಲಿ ಈವರೆಗೆ ದೊರೆತಿರುವ ಕೃತಿಗಳು ಹಾಗೂ ಶಾಸನಗಳು ಸಾಬೀತು ಮಾಡುತ್ತವೆ.
ಈ ನಿಟ್ಟಿನಲ್ಲಿ ಕನ್ನಡದ ಮೂರು ಶಾಸನಗಳನ್ನು ಪರಿಶೀಲಿಸಬಹುದು.
೧) ಹಲ್ಮಿಡಿ ಶಾಸನ:
·         ಕನ್ನಡದಲ್ಲಿ ಈವರೆಗೆ ದೊರೆತಿರುವ ಶಾಸನಗಳಲ್ಲಿ ಅತ್ಯಂತ ಪ್ರಾಚೀನ ಶಾಸನ.
·         ಹಾಸನ ತಾಲ್ಲೂಕಿನ ಹಲ್ಮಿಡಿ ಗ್ರಾಮದಲ್ಲಿ ದೊರೆತಿರುವ ಈ ಶಾಸನದ ಕಾಲ ಕ್ರಿ.ಶ. ಸುಮಾರು ೪೫೦.
·         ಅಳಕದಂಬ ಎಂಬ ರಾಜ ವಿಜಅರಸ ಎಂಬುವನಿಗೆ ಎರಡು ಗ್ರಾಮಗಳನ್ನು ದಾನವಾಗಿ ಕೊಟ್ಟ ವಿಷಯವನ್ನು ಶಾಸನ ತಿಳಿಸುತ್ತದೆ.
·         ಸಂಸ್ಕೃತ ಶ್ಲೋಕದಿಂದ ಆರಂಭವಾಗಿ ನಂತರ ಭಾಗವೆಲ್ಲ ಗದ್ಯದಲ್ಲಿ ರಚವೆಯಾಗಿದೆ. ಸಂಸ್ಕೃತ ಪದಗಳೇ ಹೆಚ್ಚಾಗಿರುವ ಈ ಶಾಸನದಲ್ಲಿ ಕೇವಲ ಇಪ್ಪತ್ತು ಕನ್ನಡ ಪದಗಳು ಮಾತ್ರ ಇರುವುದು ವಿಶೇಷ.
೨) ಬಾದಾಮಿ ಶಾಸನ:
·         ಬಿಜಾಪುರ ಜಿಲ್ಲೆಯ ಬಾದಾಮಿ ಊರಿನಲ್ಲಿ ದೊರೆತಿರುವ ಶಾಸನ.
·         ಇದರ ರಚನೆಯ ಕಾಲ ಕ್ರಿ.ಶ. ಸುಮಾರು ೭೦೦. ಕಲಿಯುಗ ವಿಪರೀತ ಎಂಬ ಬಿರುದಿದ್ದ ಕಪ್ಪೆ ಅರಭಟ್ಟ ಎಂಬುವನ ಸ್ತೋತ್ರ ಈ ಶಾಸನದ ವಿಷಯ.
ಸಾಧುಗೆ ಸಾಧು ಮಾಧುರ್ಯನ್ಗೆ ಮಾಧುರ್ಯಂ
ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್
ಮಾಧವನೀತನ್ ಪೆರನಲ್ಲ ||
ಕಟ್ಟಿದ ಸಿಂಘಮನ್ ಕೆಟ್ಟೊದೇನೆಮಗೆಂದು
ಬಿಟ್ಟವೋಲ್ ಕಲಿಗೆ ವಿಪರೀತಂಗಹಿತರ್ಕಳ್
ಕೆಟ್ಟರ್ ಮೇಣ್ ಸತ್ತರವಿಚಾರಂ ||
(ಕಲಿಯುಗ ವಿಪರೀತನು ಸಾಧುಗಳಿಗೆ ಸಾಧುವಾಗಿಯೇ ಇರುವನು. ತನ್ನ ವಿಷಯದಲ್ಲಿ ಯಾರು ಸ್ನೇಹದಿಂದಿರುವರೋ ಅವರಿಗೆ ಅವನೂ ಸ್ನೇಹಿತನು, ತನ್ನನ್ನು ಬಾಧಿಸುವ ಕಲಿಗೆ ತನ್ನ ವಿಪರೀತವಾದ ಕಲಿತನವನ್ನು ತೋರಿಸದೆ ಬಿಡನು. ಇವನು ಸಾಕ್ಷಾತ್ ಮಾಧವನೇ ಹೊರತು ಬೇರೆಯಲ್ಲ. ಕಟ್ಟಿಹಾಕಿದ ಸಿಂಹವನ್ನು “ಇದರಿಂದ ಏನು ಕೆಡಕು” ಎಂದು ಧೋರಣೆಯಿಂದ ಬಿಟ್ಟವರು ಹೇಗೆ ತಾವೇ ಕೆಡುತ್ತಾರೋ, ಸಾವನ್ನೇ ಪಡೆಯುತ್ತಾರೋ, ಹಾಗೆ ಅರಭಟ್ಟನೊಡನೆ ವೈರ ಕಟ್ಟಿಕೊಂಡವರು ಕೆಡುವರು ಅಥವಾ ಸಾಯುವರು.)
·         ಶುದ್ಧ ಕನ್ನಡದ ಛಂದಸ್ಸು ಆಗಿರುವ ತ್ರಿಪದಿ ವೃತ್ತದಲ್ಲಿ ರಚನೆಗೊಂಡಿರುವ ಶಾಸನ.
·         ಸಂಸ್ಕೃತ-ಕನ್ನಡದ ಪದಗಳನ್ನು ಸಮಸಮವಾಗಿ ಬಳಸಲಾಗಿದ್ದು, ಪದ್ಯ ಓದುವುದು, ಕೇಳುವುದು ಇಂಪಾಗಿರುತ್ತದೆ.
·         ಆ ಕಾಲಕ್ಕೆ ಶಾಸನದಲ್ಲಿಯೇ ಇಂಥ ಪದ್ಯರಚನೆ ಇರಬೇಕಾದರೆ ಇನ್ನಿತರ ಕಾವ್ಯ, ಗ್ರಂಥಗಳಲ್ಲಿ ಇಂತಹ ಬಳಕೆ ಹೆಚ್ಚಾಗಿರಬಹುದೆಂದು ಊಹಿಸಬಹುದು.
೩) ಶ್ರವಣಬೆಳಗೊಳದ ಶಾಸನ:
·         ಇದನ್ನು ಮೊದಲಿಗೆ ಓದಿದವರು ಬಿ.ಎಲ್.ರೈಸ್.
·         ಇದರ ಕಾಲ ಕ್ರಿ.ಶ. ಸುಮಾರು ೭೦೦.
·         ನಂದಿಸೇನ ಮುನಿಯು ಇಹಲೋಕದ ಸುಖ ವೈಭವಗಳು ಚಂಚಲ ಎಂಬುದನ್ನು ಮನಗಂಡು ವೈರಾಗ್ಯದಿಂದ ಸಂನ್ಯಾಸ ಹಿಡಿದು ದೇವಲೋಕವನ್ನು ಸೇರಿದನು ಎಂದು ಶಾಸನ ತಿಳಿಸುತ್ತದೆ. ಶಾಸನದ ಸಾಲುಗಳು ಹೀಗಿವೆ:
ಸುರಚಾಪಂಬೋಲೆ ವಿದ್ಯುಲ್ಲತೆಗಳ ತೆರವೋಲ್ ಮಂಜುವೋಲ್ ತೋರಿ ಬೇಗಂ
ಪಿರಿಗುಂ ಶ್ರೀರೂಪ ಲೀಲಾಧನವಿಭವಮಹಾರಾಶಿಗಳ್ ನಿಲ್ಲಮಾರ್ಗಂ
ಪರಮಾರ್ಥಂ ಮೆಚ್ಚೆನಾನೀ ಧರನಿಯುಳಿರವಾನೆಂದು ಸಂನ್ಯಾಸನಂಗೆ
ಯ್ದುರುಸತ್ವನ್ ನಂದಿಸೇನ ಪ್ರವರಮುನಿವರನ್ ದೇವಲೋಕಕ್ಕೆ ಸಂದಾನ್ ||
·         ಕನ್ನಡ ಶಬ್ದಗಳಿಗಿಂತ ಸಂಸ್ಕೃತ ಶಬ್ದಗಳೇ ಹೆಚ್ಚಾಗಿವೆ. ಉದ್ದವಾದ ಸಮಾಸ ಪದಗಳೂ ಕಾಣುತ್ತವೆ.
·         ಪೂರ್ವದ ಹಳಗನ್ನಡದ ಕೆಲವು ರೂಪಗಳನ್ನು ಕಾಣಬಹುದು. ಉದಾ: ಸಂದಾನ್, ಧರಣಿಯುಳ್. ಇವು ತಮಿಳು ಭಾಷೆಯ ಪದಗಳ ರೂಪವನ್ನು ಹೋಲುತ್ತಿರುವುದನ್ನು ಗಮನಿಸಬಹುದು.
೯ನೆಯ ಶತಮಾನಕ್ಕಿಂತ ಹಿಂದೆ ಇದ್ದ ಕನ್ನಡ ನುಡಿ ಹಳಗನ್ನಡಕ್ಕಿಂತ ಹಳೆಯದಾಗಿ ತಮಿಳು ಭಾಷೆಯನ್ನು ಬಲುಮಟ್ಟಿಗೆ ಹೋಲುತ್ತಿತ್ತು. ಸಂಸ್ಕೃತ ಭಾಷೆ ಹಾಗೂ ಸಾಹಿತ್ಯದ ಅನುಸರಣವನ್ನು ಕನ್ನಡಿಗರು ಮಾಡುತ್ತಿದ್ದರು. ದೇಶೀಯ ಪದ್ಯಗಳ ಜೊತೆಗೆ ಸಂಸ್ಕೃತ ಪದ್ಯಬಂಧವೂ ಪ್ರಚುರವಾಗಿತ್ತು.  ಗ್ರಂಥಸ್ಥವಾಗದೇ ಇರುವ ಜನಪದ ಸಾಹಿತ್ಯವೂ ಯಥೇಚ್ಛವಾಗಿ ಇದ್ದಿರಬೇಕು.
·         ಕನ್ನಡ ಸಾಹಿತ್ಯದ ಆರಂಭ ಕಾಲದ ಸ್ಥಿತಿ-ಗತಿಗಳನ್ನು ತಿಳಿಯಲು ಇರುವ ಎರಡನೆಯ ಆಧಾರ ಕವಿರಾಜಮಾರ್ಗ ಕೃತಿ. ಇದುವರೆಗೆ ದೊರೆತಿರುವ ಕನ್ನಡದ ಗ್ರಂಥಗಳಲ್ಲೇ ಅತ್ಯಂತ ಪುರಾತನವಾದ ಕೃತಿ ಕವಿರಾಜಮಾರ್ಗದ ಕಾಲ ಕ್ರಿ.ಶ. ಸುಮಾರು ೮೫೦.
·         ಮಾನ್ಯಖೇಟದಲ್ಲಿ ರಾಜ್ಯಭಾರ ಮಾಡುತ್ತಿದ್ದ ರಾಷ್ಟ್ರಕೂಟ ನೃಪತುಂಗನ ಅಭಿಮತದಂತೆ ಕವಿರಾಜಮಾರ್ಗ ಕೃತಿಯನ್ನು ರಚಿಸಿದವನು ಶ್ರೀವಿಜಯ ಎಂಬ ಅಧಿಕಾರಿ.
·         ಕಾವ್ಯದ ಗುಣ ದೋಷಗಳನ್ನು ವಿವರಿಸುವ ಕವಿರಾಜಮಾರ್ಗವು ಒಂದು ಲಕ್ಷಣಗ್ರಂಥ.
·         ಕನ್ನಡ ನಾಡಿನ ವಿಸ್ತೀರ್ಣ, ಜನರ ನಾಗರೀಕತೆ ಮೊದಲಾದ ವಿಷಯಗಳ ಕುರಿತು ಕವಿ ಹೇಳುವ ಹಲವು ವಿಷಯಗಳು ಸ್ವಾರಸ್ಯವಾಗಿವೆ. ಕನ್ನಡ ಸಾಹಿತ್ಯದ ಪ್ರಾಚೀನತೆಯನ್ನು ಸಾರುವ ಹಲವು ಹೇಳಿಕೆಗಳೂ ಈ ಕೃತಿಯಲ್ಲಿವೆ.
·         ಕಾವೇರಿಯಿಂದಮಾ ಗೋದಾವರಿವರೆಗಿರ್ಪ ನಾಡದಾ ಕನ್ನಡದೊಳ್ ಎಂಬುದಾಗಿ ಕನ್ನಡ ನಾಡಿನ ವ್ಯಾಪಕತೆಯನ್ನು ತಿಳಿಸುತ್ತದೆ. ಒಮ್ಮೆಗೆ ಕೊಲ್ಲಾಪುರವು ಕನ್ನಡನಾಡಿನ ಒಂದು ಭಾಗವಾಗಿತ್ತು ಎಂದರೆ ಆಶ್ಚರ್ಯಪಡಬೇಕಿಲ್ಲ.
·         ವಿಸ್ತಾರವಾದ ದೇಶದಲ್ಲಿ ತಿರುಳ್ಗನ್ನಡದ ನಾಡು ಯಾವುದೆಂದು ಕವಿರಾಜಮಾರ್ಗಕಾರ ಹೀಗೆ ಹೇಳಿದ್ದಾನೆ:
ಅದರೊಳಗಂ ಕಿಸುವೊಳಲಾ
ವಿದಿತಮಹಾಕೊಪಣಾನಗರದಾ ಪುಲಿಗೆರೆಯಾ
ಸದಭಿಸ್ತುತಮಪ್ಪೊಂಕುಂ
ದಹ ನಡುವಣ ನಾಡೆ ನಾಡೆ ಕನ್ನಡದ ತಿರುಳ್ ||
·         ಕಿಸುವೊಳಲ್ ಎಂಬುದು ಈಗಿನ ಬಾದಾಮಿಯ ಸಮೀಪದ ಪಟ್ಟದಕಲ್ಲು. ಒಂಕುಂದ ಎಂಬುದು ಬೆಳಗಾವಿಯ ಸಮೀಪದ ಒಕ್ಕುಂದ. ಈಗಿನ ಲಕ್ಷ್ಮೇಶ್ವರ ಅಂದಿನ ಪುಲಿಗೆರೆ. ಕೊಪ್ಪಳವೇ ಕೊಪಣ. ಇದರಲ್ಲಿ ಮೈಸೂರಿನ ಹೆಸರಿಲ್ಲದಿರುವುದನ್ನು ಗಮನಿಸಬೇಕು. ಕನ್ನಡ ಸಾಹಿತ್ಯವು ಮೊದಲು ಉತ್ತರದಲ್ಲಿದ್ದು ಕ್ರಮೇಣ ದಕ್ಷಿಣದ ಕಡೆಗೆ ಬಂದು ಕೆಲ ಕಾಲ ವಿಜಯನಗರದಲ್ಲಿದ್ದು ಕೊನೆಗೆ ಮೈಸೂರನ್ನು ಸೇರಿದಂತೆ ತೋರುತ್ತದೆ.
·         ಕನ್ನಡಿಗರು ಕುರಿತೋದದೆಯಂ ಕಾವ್ಯಪ್ರಯೋಗ ಪರಿಣತಮತಿಗಳು ಎಂದು ಕವಿರಾಜಮಾರ್ಗಕಾರ ಹೇಳುತ್ತಾನೆ.
·         ತನಗಿಂತ ಮುಂಚೆ ಇದ್ದ ಕನ್ನಡ ಕವಿಗಳ ಹೆಸರುಗಳನ್ನು ಹೇಳಿದ್ದಾನೆ. ಕವೀಶ್ವರ, ಪಂಡಿತ, ಚಂದ್ರ, ಲೋಕಪಾಲ ಮೊದಲಾದವರು ಕನ್ನಡದ ಕೃತಿಗಳನ್ನು ಬರೆದಿದ್ದರಂತೆ. ವಿಮಳೋದಯ, ನಾಗಾರ್ಜುನ, ಜಯಬಂಧು, ದುರ್ವಿನೀತ ಮೊದಲಾದವರು ಗದ್ಯಾಶ್ರಮಗುರುಪದತಾ ಪ್ರತೀತಿಯನ್ನು ಕೈಗೊಂಡಿದ್ದರಂತೆ.
ಕವಿರಾಜಮಾರ್ಗಕಾರನಿಗಿಂತ ಮುಂಚೆ ಕನ್ನಡದಲ್ಲಿ ಕಾವ್ಯರಚನೆ ನಡೆದು ಸಂಸ್ಕೃತ ಕನ್ನಡಗಳೆರಡೂ ಬೆರಕೆಯಾಗಿ ಒಂದು ಪ್ರೌಢ ಶೈಲಿ ಏರ್ಪಟ್ಟಿದ್ದರಿಂದ ಅವನ ತರುವಾಯ ಬಂದ ಪಂಪ ಮೊದಲಾದ ಕವಿಗಳು ಆ ಶೈಲಿಯನ್ನು ಅನುಸರಿಸಿ ಕಾವ್ಯ ಬರೆಯಲು ಅನುಕೂಲವಾಯಿತು.

ಸೋಮವಾರ, ನವೆಂಬರ್ 1, 2010

ಇಂದಿನ ವಿಶಾಲ ಕರ್ನಾಟಕಕ್ಕೆ ೫೪ ವಸಂತಗಳು - ಬನ್ನಿ ನಮ್ಮ ಕವಿಗಳನ್ನು ನೆನೆಯೋಣ

ಕನ್ನಡದ ಕವಿಗಳ ಜನನ ದಿನಾಂಕಗಳನ್ನು ಕೆಳಗಿನ ಪಟ್ಟಿಯಲ್ಲಿ ನೀಡಲಾಗಿದೆ. ಓದಿ, ಆನಂದಿಸಿ. ಎಲ್ಲರಿಗೂ ಮತ್ತೊಮ್ಮೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.