ಶುಕ್ರವಾರ, ಅಕ್ಟೋಬರ್ 14, 2011

ಕನ್ನಡ ಸಾಹಿತ್ಯದಲ್ಲಿನ ಸಂಧಿಕಾಲ

ಮುಮ್ಮಡಿ ಕೃಷ್ಣರಾಜ ಒಡೆಯರ್:
·         ಚಿಕ್ಕದೇವರಾಜ ಒಡೆಯರ್ ಅವರ ನಂತರ ವಿದ್ವತ್ಕವಿಪೋಷಕರಾದ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ಅನೇಕ ವಿದ್ವಾಂಸರಿಗೆ ಆಶ್ರಯದಾತರಾಗಿದ್ದರು.
·         ಶ್ರೀಕೃಷ್ಣರಾಜ ವಾಣೀವಿಲಾಸ ಭಾರತ, ಶಾಕುಂತಲ ನಾಟಕದ ನವೀನಟೀಕೆ ಮೊದಲಾದ ಹಲವು ಗದ್ಯಗ್ರಂಥಗಳನ್ನು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ರಚಿಸಿದ್ದಾರೆ.
ಕೆಂಪುನಾರಾಯಣ:
·         ಈತ ಮುದ್ರಾಮಂಜೂಷ ಎಂಬ ಉತ್ತಮ ಗದ್ಯಗ್ರಂಥವನ್ನು ರಚಿಸಿದನು.
·         ಈ ಗ್ರಂಥವು ಚಾಣಕ್ಯನು ನಂದರ ವಿನಾಶವನ್ನುಂಟುಮಾಡಿದ ಕಥೆಯನ್ನೂ, ಆನಂತರದ ಬೆಳವಣಿಗೆಗಳ ಕಥೆಯನ್ನೂ ಆಮೂಲಾಗ್ರವಾಗಿ ತಿಳಿಸುತ್ತದೆ.
ಚಾಮರಾಜ ಒಡೆಯರ್ ಅವರ ಕಾಲದಲ್ಲಿ ಅನೇಕ ಸಂಸ್ಕೃತ ನಾಟಕಗಳು ಕನ್ನಡಕ್ಕೆ ತರ್ಜುಮೆಯಾದವು.
·         ಅಭಿನವ ಕಾಳಿದಾಸ ಎಂದೇ ಖ್ಯಾತರಾದ ಬಸವಪ್ಪಶಾಸ್ತ್ರಿಯವರು ತಮ್ಮ ಶಾಕುಂತಲ ಮೊದಲಾದ ನಾಟಕಗಳನ್ನೂ, ದಮಯಂತೀ ಸ್ವಯಂವರ ಮುಂತಾದ ಕಾವ್ಯಗಳನ್ನು ಬರೆದದ್ದು ಚಾಮರಾಜ ಒಡೆಯರ್ ಅವರ ಕಾಲದಲ್ಲಿಯೇ.
ಮುದ್ದಣ:
·         19ನೆಯ ಶತಮಾನದ ಕೊನೆಯಲ್ಲಿ ಗ್ರಂಥರಚನೆ ಮಾಡಿದ ಮುದ್ದಣನ ನಿಜವಾದ ಹೆಸರು ನಂದಳಿಕೆ ಲಕ್ಷ್ಮೀನಾರಾಯಣಪ್ಪ.
·         ಈತ ಹಳಗನ್ನಡ ಗದ್ಯದಲ್ಲಿ ಬರೆದ ರಾಮಾಶ್ವಮೇಧದ ಹಾಸ್ಯಭರಿತ ಸಂಭಾಷಣೆಗಳು ಕನ್ನಡಿಗರಿಗೆ ಅಚ್ಚುಮೆಚ್ಚು.
·         ಮುದ್ದಣನು ಅದ್ಭುತ ರಾಮಾಯಣ, ರಾಮಪಟ್ಟಾಭಿಷೇಕಗಳನ್ನೂ ಹಾಗೂ ಕೆಲವು ಯಕ್ಷಗಾನ ಪ್ರಸಂಗಗಳನ್ನೂ ರಚಿಸಿರುವುದಾಗಿ ತಿಳಿದಿದೆ.
ಜನಪದ ಸಾಹಿತ್ಯ:
·         ಶ್ರೀಮಂತ ಜನಪದದಲ್ಲಿನ ಪದ್ಯಗಳು ಬಾಯಿಂದ ಬಾಯಿಗೆ ಹರಿದಿವೆ.
·         ಅನೇಕ ಲಾವಣಿಗಳು ಪ್ರಚಾರದಲ್ಲಿವೆ.
·         ವೀರತ್ವದ ಟಿಪ್ಪುಸುಲ್ತಾನ್ ಲಾವಣಿ, ಸರ್ಜಪ್ಪನಾಯಕನ ಲಾವಣಿ, ಹಲಗಲಿಯ ಬೇಡರ ಲಾವಣಿಗಳು ಪ್ರಸಿದ್ಧವಾಗಿವೆ.
·         ಜನಪದ ಕಥೆಗಳು ರೋಮಾಂಚಕವಾಗಿರುತ್ತವೆ.
·         ಸಾಮಾಜಿಕ ಜೀವನದ ಚಿತ್ರಣವನ್ನು ಕಟ್ಟಿಕೊಡುವಲ್ಲಿ ಸಫಲವಾಗುತ್ತವೆ.
·         ಜನಪದರ ಹಾಡುಗಳಂತೂ ನಿಜಕ್ಕೂ ಜನಜೀವನದ ಅವಿಭಾಜ್ಯ ಅಂಗವೇ ಆಗಿವೆ.
ಸರ್ವಜ್ಞ:
·         ಈತನ ತ್ರಿಪದಿಗಳು ಪ್ರಸಿದ್ಧವಾಗಿವೆ.
·         ಈತ ಬಹುತೇಕ ಆಶುಕವಿಯೇ ಇದ್ದಿರಬೇಕು.
·         ಈತ ಕನ್ನಡ ನಾಡನ್ನೆಲ್ಲಾ ಸಂಚರಿಸಿದಂತೆ ಇವನ ಪದ್ಯಗಳಿಂದ ತಿಳಿಯುತ್ತದೆ.
·         ಈತ ಶೈವಧರ್ಮದ ಹಲವು ಸಿದ್ಧಾಂತಗಳನ್ನೂ ಲೌಕಿಕ ನೀತಿಗಳನ್ನೂ ಉಪದೇಶಿಸುತ್ತಾನೆ.
·         ಈತ ಸಮಾಜದ ಕುಂದುಕೊರತೆಗಳನ್ನು ಎತ್ತಿ ತೋರಿಸುತ್ತಾನೆ.
·         ಸರ್ವಜ್ಞ ಹಾಸ್ಯಪ್ರಿಯ; ಈತನದು ನಕ್ಕು ನಗಿಸುವ ಗುಣ.

ಚಿಕ್ಕದೇವರಾಯರ ಕಾಲ

ವಿಜಯನಗರ ಸಾಮ್ರಾಜ್ಯ ನಾಶವಾದ ನಂತರ ಸಣ್ಣಪುಟ್ಟ ಪಾಳೆಯಗಾರರು, ಆಡಳಿತಗಾರರು ಹೆಚ್ಚಿದುದರಿಂದ ರಾಜ್ಯದಲ್ಲಿ ಕ್ಷೋಭೆಯುಂಟಾಗಿ ಅಶಾಂತಿ ನೆಲಸಿತು. ಹೀಗಾಗಿ ಸಾಹಿತ್ಯದಲ್ಲಿ ಹೆಚ್ಚು ಕೆಲಸ ನಡೆಯಲು ಸಾಧ್ಯವಾಗಲಿಲ್ಲ. ಈ ಸ್ಥಿತಿಯಲ್ಲಿದ್ದ ಕನ್ನಡ ಸಾಹಿತ್ಯವು ಪುನಃ ತಲೆಯೆತ್ತಿದ್ದು ಮೈಸೂರಿನ ಅರಸರ ಕಾಲದಲ್ಲಿ.
ಚಿಕ್ಕದೇವರಾಜ ಒಡೆಯರ್:
·         ಚಿಕ್ಕದೇವರಾಯರು ಸ್ವಯಂ ಕವಿಗಳು ಹಾಗೂ ಕವಿಪೋಷಕರು.
·         ಸ್ವತಃ ಗೀತಗೋಪಾಲ ಮತ್ತು ಚಿಕ್ಕದೇವರಾಜ ಬಿನ್ನಪಂ ಎಂಬ ಎರಡು ಗ್ರಂಥಗಳನ್ನು ರಚಿಸಿದ್ದಾರೆ.
·         ಚಿಕ್ಕದೇವರಾಯರು ಗೀತಗೋಪಾಲ ಕಾವ್ಯವನ್ನು ಜಯದೇವನ ಗೀತಗೋವಿಂದ ಸಂಸ್ಕೃತ ಗ್ರಂಥದ ಮಾದರಿಯನ್ನು ಅನುಸರಿಸಿ ರಚಿಸಿದಂತೆ ತೋರುತ್ತದೆ.
·         ಮೋಕ್ಷೋಪಾಯಮಂ ಸಾಧಿಸುವುದಕ್ಕೆ ಉಪಾಯವಾದ ಪ್ರಪತ್ತಿ ಸ್ವರೂಪವನ್ನು ಕೀರ್ತನೆಗಳ ಮೂಲಕ ತಿಳಿಸುವುದೇ ಕವಿಯ ಉದ್ದೇಶ.
·         ಕೀರ್ತನೆಗಳಲ್ಲಿ ಭಾಗವತವೇ ಮೊದಲಾದ ಪುರಾಣೇತಿಹಾಸಗಳಲ್ಲಿರುವ ಭಾಗವತೋತ್ತಮರ ಅಭಿಪ್ರಾಯಗಳೂ ಅಡಕವಾಗಿವೆ.
·         ಕವಿಯು ಮೊದಲಿಗೆ ತತ್ವವನ್ನು ವಚನದಲ್ಲಿ ಹೇಳಿ, ನಂತರ ಅದಕ್ಕೆ ಸಂಬಂಧಿಸಿದ ಕೀರ್ತನೆಯನ್ನು ಹೇಳಿರುವುದು ವಿಶೇಷವಾಗಿದೆ.
·         ಸುಲಭ ಮಾತುಗಳಲ್ಲಿ ಮಹತ್ವದ ವಿಷಯಗಳನ್ನು ಸಂಗೀತಕ್ಕೆ ಹೊಂದುವ ಹಾಗೆ ಹೇಳಿರುವುದು ಕವಿಯ ಚಾತುರ್ಯ.
·         ತಿರುಮಲಾರ್ಯ, ಸಿಂಗರಾರ್ಯ, ಚಿಕ್ಕುಪಾಧ್ಯಾಯ ಎಂಬ ಕವಿಗಳೂ, ಹೊನ್ನಮ್ಮ ಎಂಬ ಕಬ್ಬಿಗಿತಿಯೂ ಚಿಕ್ಕದೇವರಾಯರ ಆಶ್ರಿತರಾಗಿದ್ದರು.
ತಿರುಮಲಾರ್ಯ:
·         ತಿರುಮಲಾರ್ಯ ಕವಿಯು ಅಪ್ರತಿಮವೀರ ಚರಿತೆ ಎಂಬ ಅಲಂಕಾರಶಾಸ್ತ್ರ ಗ್ರಂಥವನ್ನು ರಚಿಸಿದರು.
·         ಚಿಕ್ಕದೇವರಾಯರಿಗೆ ಅಪ್ರತಿಮವೀರ ಎಂಬ ಬಿರುದು ಇದ್ದುದಾಗಿ ತಿಳಿಯುತ್ತದೆ.
·         ಚಿಕ್ಕದೇವರಾಯ ವಂಶಾವಳಿಯಲ್ಲಿ ದೊರೆಯ ಪೂರ್ವಿಕರ ಚರಿತ್ರೆಯೂ, ಶ್ರೀವೈಷ್ಣವ ಧರ್ಮದ ಸ್ವರೂಪವೂ ವರ್ಣಿತವಾಗಿದೆ.
·         ಚಿಕ್ಕದೇವರಾಜ ವಿಜಯಂ ಎಂಬ ಚಂಪೂ ಕೃತಿಯನ್ನೂ ತಿರುಮಲಾರ್ಯ ರಚಿಸಿರುವುದಾಗಿ ತಿಳಿಯುತ್ತದೆ.
ಚಿಕ್ಕುಪಾಧ್ಯಾಯ:
·         ಚಿಕ್ಕದೇವರಾಜರಲ್ಲಿ ಕರಣಿಕಾಗ್ರೇಸರನೂ ಮಂತ್ರಿಯೂ ಆಗಿದ್ದವನು ಚಿಕ್ಕುಪಾಧ್ಯಾಯ.
·         ಶ್ರೀವೈಷ್ಣವ ಬ್ರಾಹ್ಮಣನಾಗಿದ್ದ ಚಿಕ್ಕುಪಾಧ್ಯಾಯ ಕನ್ನಡದಲ್ಲಿ ಅನೇಕ ಗ್ರಂಥಗಳನ್ನು ರಚಿಸಿದನು.
·         ದಿವ್ಯಸೂರಿ ಚರಿತ್ರೆ, ರುಕ್ಮಾಂಗದ ಚರಿತ್ರೆ, ವಿಷ್ಣುಪುರಾಣ, ಕಮಲಾಚಲ ಮಹಾತ್ಮ್ಯೆ, ಹಸ್ತಿಗಿರಿ ಮಹಾತ್ಮ್ಯೆ ಮೊದಲಾದ ಚಂಪೂ ಕೃತಿಗಳನ್ನೂ ಪಶ್ಚಿಮರಂಗ ಮಹಾತ್ಮ್ಯೆ ಮೊದಲಾದ ಸಾಂಗತ್ಯ ಗ್ರಂಥಗಳನ್ನೂ ಶುಕಸಪ್ತತಿ, ಕಾಮಂದಕನೀತಿ ಮೊದಲಾದ ಹಲವು ಗದ್ಯ ಗ್ರಂಥಗಳನ್ನು ಚಿಕ್ಕುಪಾಧ್ಯಾಯ ಬರೆದಿರುವುದಾಗಿ ತಿಳಿಯುತ್ತದೆ.
·         ವಿಷ್ಣುಪುರಾಣವನ್ನು ಚಂಪೂರೂಪದಲ್ಲಿ ಮಾತ್ರವಲ್ಲದೆ ಗದ್ಯರೂಪದಲ್ಲಿಯೂ ಬರೆದಿದ್ದಾನೆ.
·         ಶ್ರೀವೈಷ್ಣವ ಧರ್ಮ ಪ್ರಚಾರ ಈತನಿಗೆ ಕಾವ್ಯರಚನೆಯಲ್ಲಿದ್ದ ಉದ್ದೇಶ.
·         ಈತನ ನಿಜವಾದ ಹೆಸರು ಲಕ್ಷ್ಮೀಪತಿಯೆಂದೂ, ತೆರಕಣಾಂಬಿಯು ಈತನ ಜನ್ಮಸ್ಥಳ ಎಂದೂ ತಿಳಿದಿದೆ.
ಸಿಂಗರಾರ್ಯ:
·         ಸಿಂಗರಾರ್ಯನು ಸಂಸ್ಕೃತದಲ್ಲಿ ಶ್ರೀಹರ್ಷ ಬರೆದ ರತ್ನಾವಳಿಯ ಮಾದರಿಯನ್ನು ಅನುಸರಿಸಿ, ಶ್ರೀಕೃಷ್ಣ ಮಿತ್ರವಿಂದೆಯನ್ನು ಮದುವೆಯಾದ ಕಥೆಯನ್ನು ನಾಟಕರೂಪದಲ್ಲಿ ಮಿತ್ರವಿಂದಾ ಗೋವಿಂದ ಎಂಬ ಹೆಸರಿನಲ್ಲಿ ರಚಿಸಿದನು.
·         ಮಿತ್ರವಿಂದಾ ಗೋವಿಂದ ಕನ್ನಡದ ಮೊದಲ ನಾಟಕ ಎಂಬ ಕಾರಣದಿಂದ ಪ್ರಾಶಸ್ತ್ಯವನ್ನು ಪಡೆದುಕೊಂಡಿದೆ.
·         ಈ ಕಾಲಕ್ಕೆ ಯಕ್ಷಗಾನಗಳು ಬಳಕೆಯಲ್ಲಿದ್ದುವೆಂದು ಕಂಡುಬರುತ್ತದೆ.
ಹೊನ್ನಮ್ಮ:
·         ಈಕೆ ಸಿಂಗರಾರ್ಯನ ಶಿಷ್ಯೆ.
·         ಹದಿಬದೆಯ ಧರ್ಮ ಕೃತಿಯನ್ನು ಸಾಂಗತ್ಯದಲ್ಲಿ ರಚಿಸಿ ಮೆಚ್ಚಿಸಿದಾಕೆ ಹೊನ್ನಮ್ಮ.
·         ಈಕೆ ಚಿಕ್ಕದೇವರಾಜ ಒಡೆಯರ್ ಅವರ ಅಂತಃಪುರದಲ್ಲಿ ಸಂಚಿಯ ಊಳಿಗದವಳಾಗಿದ್ದಳು.
·         ಅರಸಿಯ ಆಜ್ಞೆಯಿಂದಾಗಿ ತಾನು ಈ ಗ್ರಂಥವನ್ನು ಬರೆಯತೊಡಗಿದ್ದಾಗಿ ಹೊನ್ನಮ್ಮ ಹೇಳಿಕೊಂಡಿದ್ದಾಳೆ.
·         ಪತಿವ್ರತೆಯರಾದ ಹೆಂಗಸರು ಹೇಗೆ ನಡೆದುಕೊಳ್ಳಬೇಕು ಎಂಬುದೇ ಈ ಕೃತಿಯ ವಸ್ತುವಿಷಯ.
·         ಹೊನ್ನಮ್ಮನ ಹಲವು ಅಭಿಪ್ರಾಯಗಳು ಈ ಕಾಲದ ನಮಗೆ ಒಪ್ಪಿಗೆಯಾಗದಿದ್ದರೂ ಆಕೆ ಸುಲಲಿತವಾಗಿ ಹಲವು ನೀತಿಗಳನ್ನು ಹೇಳಿರುವ ರೀತಿ ಮೆಚ್ಚುಗೆಯಾಗುತ್ತದೆ.
·         ಸಂಚಿಯ ಹೊನ್ನಮ್ಮನ ಹದಿಬದೆಯ ಧರ್ಮ ಚೆಲುವಾದ ತಿಳಿಗನ್ನಡದ ಲಲಿತಗ್ರಂಥವಾಗಿದ್ದು ಸರ್ವಜನಗ್ರಾಹ್ಯವಾಗಿದೆ.
ಷಡಕ್ಷರದೇವ:
·         ಈತನ ಕಾಲ ಕ್ರಿ.. ಸುಮಾರು 1655.
·         ರಾಜಶೇಖರ ವಿಲಾಸ, ವೃಷಭೇಂದ್ರ ವಿಜಯ ಹಾಗೂ ಶಬರಶಂಕರವಿಲಾಸ ಎಂಬ ಮೂರು ಗ್ರಂಥಗಳನ್ನು ಬರೆದಿದ್ದಾನೆ.
·         ಷಡಕ್ಷರದೇವನು ಎ()ಳಂದೂರು ಮಠಕ್ಕೆ ಸ್ವಾಮಿಯಾಗಿದ್ದನೆಂದು ಅಲ್ಲಿಯೇ ಸಮಾಧಿಯನ್ನು ಹೊಂದಿದನೆಂದು ತಿಳಿದಿದೆ.
·         ಸಂಸ್ಕೃತ-ಕನ್ನಡಗಳೆರಡರಲ್ಲೂ ಪಾಂಡಿತ್ಯ ಪಡೆದಿದ್ದ ಈತನ ನಿರರ್ಗಳ ಶೈಲಿ, ಚಮತ್ಕಾರದ ವರ್ಣನೆಗಳು ಜನರ ಮನ್ನಣೆಗೆ ಪಾತ್ರವಾಗಿವೆ.
ವೆಂಕಟಾರ್ಯ ಶಿಷ್ಯ:
·         ಈ ಕವಿ ಶ್ರೀಕೃಷ್ಣಗೋಪೀ ವಿಲಾಸಂ ಎಂಬ ಗ್ರಂಥವನ್ನು ಬರೆದನು.
·         ಈತನ ನಿಜವಾದ ಹೆಸರು ತಿಳಿದಿಲ್ಲ.
·         ಶುಕಮಹಾ ಯೋಗೀಂದ್ರರು ಈ ಕಥೆಯನ್ನು ಹರಿಭಕ್ತ ಪರೀಕ್ಷಿತನಿಗೆ ಸಕಲಾಗಮಾರ್ಥ ಸಂಗ್ರಹ ಎಂದು ಹೇಳಿದರಂತೆ.
·         ಈ ಗ್ರಂಥದ ಪೀಠಿಕೆಯಲ್ಲಿ ಕವಿ ಹೇಳಿಕೊಂಡಿರುವ ಮಾತು ಆ ಕಾಲದಲ್ಲಿ ಮತ್ತೆ ಉಂಟಾಗಿದ್ದ ಸಂಸ್ಕೃತದ ಪ್ರಾಬಲ್ಯವನ್ನು ಸೂಚಿಸುತ್ತದೆ.
ಗಂಗೆಯ ಗಾಜ ಕುಪ್ಪಿಗೆಯೊಳು ತರಲು ತಾಂ
ಗಂಗೆಯಹುದಲ್ಲದೆ ಜಲವಹುದೆ
ರಂಗನ ಕಥೆಯ ಭಾಷಾಂತರದೊಳು ಪೇಳೆ ತಾ
ಮಂಗಳಮಹಿಮೆ ತಪ್ಪುವುದೆ ?
·         ಭಗವಂತನ ಚರಿತ್ರೆಯನ್ನು ಕನ್ನಡದಲ್ಲಿ ಹೇಳಿದರೆ ಅದು ಅಪವಿತ್ರವಾಗುವುದಿಲ್ಲ; ಅದರ ಮಹಿಮೆ ಕುಗ್ಗುವುದಿಲ್ಲ ಎಂಬುದು ಅವನ ಅಭಿಪ್ರಾಯ.
ಭಟ್ಟಾಕಳಂಕ:
·         ಶಬ್ದಾನುಶಾಸನ ಎಂಬ ಕನ್ನಡ ವ್ಯಾಕರಣವನ್ನು ಸಂಸ್ಕೃತದಲ್ಲಿ ಬರೆದ ಭಟ್ಟಾಕಳಂಕ ಕನ್ನಡವು ಸಂಸ್ಕೃತಕ್ಕಿಂತ ಯಾವ ವಿಧದಲ್ಲೂ ಕಡಿಮೆಯಿಲ್ಲ ಎಂದು ಸ್ಥಾಪಿಸಲು ಬಹಳ ಪ್ರಯಾಸಪಟ್ಟಿದ್ದಾನೆ.

ಕನ್ನಡ ಸಾಹಿತ್ಯದ ಸ್ವಾತಂತ್ರ್ಯ ಯುಗ (ಭಾಗ-2: ಕುಮಾರವ್ಯಾಸ, ಲಕ್ಷ್ಮೀಶ, ರತ್ನಾಕರವರ್ಣಿ ಹಾಗೂ ದಾಸಸಾಹಿತ್ಯ)

ಕುಮಾರವ್ಯಾಸ:
·         ಗದುಗಿನ ನಾರಣಪ್ಪ ಅಥವಾ ಕುಮಾರವ್ಯಾಸ ಶುದ್ಧ ಕನ್ನಡದ ಕವಿ; ಉದ್ದಾಮ ಕವಿ.
·         ಗದುಗಿನ ವೀರನಾರಾಯಣ ಸ್ವಾಮಿಯ ಅಂಕಿತದಲ್ಲಿ ಕಾವ್ಯ ಬರೆದವನು.
·         ಈತನ ಲೋಕಪ್ರಿಯ ಕಾವ್ಯ ಕರ್ಣಾಟ ಭಾರತ ಕಥಾಮಂಜರಿ ಅಥವಾ ಕುಮಾರವ್ಯಾಸ ಭಾರತ.
·         ಕನ್ನಡ ದೇಶದಲ್ಲಿ ಗದುಗಿನ ಭಾರತವನ್ನು ಓದದ ಹಳ್ಳಿಯಿಲ್ಲ; ಓದಿ ತಲೆದೂಗದ ಕನ್ನಡಿಗನಿಲ್ಲ.
·         ನಾರಣಪ್ಪನ ಭಾರತವು ನವರಸಭರಿತವಾದ ಕಾವ್ಯರತ್ನ.
·         ತಾನು ಹಲಗೆ, ಬಳಪ ಹಿಡಿದು ಬರೆದು, ಅಳಿಸಿ ಪ್ರಯಾಸದಿಂದ ಕವಿತ್ವ ರಚನೆ ಮಾಡದೆ ಒಂದೇ ಸಲ ಕಾವ್ಯವನ್ನು ರಚಿಸುವವನೆಂದು ಕುಮಾರವ್ಯಾಸನ ಹೇಳಿಕೆ. ಇದು ಜಂಭದ ಮಾತಲ್ಲ.
·         ಕುಮಾರವ್ಯಾಸನ ಕಥಾ ಸಂವಿಧಾನ, ಶೈಲಿ, ಪಾತ್ರರಚನೆ, ರೂಪಕಾದಿ ಅಲಂಕಾರಗಳು ಮೊದಲಾದ ಶ್ರೇಷ್ಠ ಅಂಶಗಳು ಆತನನ್ನು ಕನ್ನಡದ ಅಗ್ರಗಣ್ಯ ಕವಿಗಳಲ್ಲಿ ಒಬ್ಬನೆಂದು ಕರೆಯುವಂತೆ ಮಾಡಿವೆ.
·         ನಾರಣಪ್ಪ ಭಾರತದ ಮೊದಲ ೧೦ ಪರ್ವಗಳನ್ನು ಮಾತ್ರ ಬರೆದು ಸ್ವರ್ಗಸ್ಥನಾದನು. ಮಿಕ್ಕ ೮ ಪರ್ವಗಳನ್ನು ತಿಮ್ಮಣ್ಣಕವಿಯು ವಿಜಯನಗರದ ಆಶ್ರಯದಲ್ಲಿದ್ದು ಬರೆದು ಮುಗಿಸಿದನು.
ಈ ಸಂದರ್ಭದಲ್ಲಿ ಬ್ರಾಹ್ಮಣ ಧರ್ಮಕ್ಕೆ ಸಂಬಂಧಪಟ್ಟ ಹಲವು ಸಂಸ್ಕೃತ ಗ್ರಂಥಗಳು ಕನ್ನಡಕ್ಕೆ ಪರಿವರ್ತಿತವಾದುವು.
·         ಕುಮಾರ ವಾಲ್ಮೀಕಿಯು ತನ್ನ ತೊರವೆ ರಾಮಾಯಣವನ್ನು ಷಟ್ಪದಿ ಕಾವ್ಯವಾಗಿ ಬರೆದನು.
ಲಕ್ಷ್ಮೀಶ:
·         ಲಕ್ಷ್ಮೀಶನ ಬಿರುದುಗಳಲ್ಲೊಂದು ಕರ್ಣಾಟಕವಿಚೂತವನ ಚೈತ್ರ.
·         ಲಕ್ಷ್ಮೀಶನು ಜೈಮಿನಿ ಭಾರತ ಎಂಬ ಕಾವ್ಯವನ್ನು ವಾರ್ಧಕ ಷಟ್ಪದಿಯಲ್ಲಿ ರಚಿಸಿದನು.
·         ಜೈಮಿನಿ ಭಾರತವು ಲಲಿತವೂ, ಮನೋಹರವೂ ಆಗಿರುವುದರಿಂದ ಪಂಡಿತ-ಪಾಮರರಿಗೆ ಪ್ರಿಯವಾಗಿದೆ.
·         ಜೈಮಿನಿ ಭಾರತದಲ್ಲಿನ ಸೀತಾ ವನವಾಸ, ಚಂದ್ರಹಾಸನ ಚರಿತೆ ಮೊದಲಾದ ಕಥೆಗಳು ಉತ್ತಮವಾಗಿ ನಿರೂಪಿತವಾಗಿವೆ.
·         ಸೀತೆಯು ಅರಿಯದೆ ಕಾಡಿಗೆ ಹೋಗಿ ಅಲ್ಲಿ ಲಕ್ಷ್ಮಣನ ಬಾಯಿಂದ ತನ್ನ ಪತಿಯ ಆಜ್ಞೆಯನ್ನು ಕೇಳಿದಾಗ ಅವಳು ಆಡುವ ಮಾತು ಕಲ್ಲೆದೆಯನ್ನೂ ಕರಗಿಸುತ್ತದೆ.
·         ಮನ ಕರಗುವ ದೃಶ್ಯಗಳನ್ನು ವರ್ಣಿಸುವುದರಲ್ಲಿ ಮಾತ್ರವಲ್ಲ, ಚಮತ್ಕಾರವಾಗಿ ಶ್ಲೇಷೆಯನ್ನು ತರುವುದರಲ್ಲಿಯೂ, ಕಿವಿಗೆ ಇಂಪಾಗುವಂತೆ ಪದಗಳನ್ನು ಜೋಡಿಸುವುದರಲ್ಲಿಯೂ ಲಕ್ಷ್ಮೀಶ ನಿಪುಣ. ಆದ್ದರಿಂದಲೇ ಲಕ್ಷ್ಮೀಶನಿಂಚರದಿಂಪು ಎಂಬ ಮಾತು ಪ್ರಸಿದ್ಧವಾಗಿದೆ.
ರತ್ನಾಕರವರ್ಣಿ:
ಈತ ಸುಮಾರು ಕ್ರಿ..1557ರ ಸಮಯದಲ್ಲಿ ಗ್ರಂಥರಚನೆ ಮಾಡುತ್ತಿದ್ದನು.
ಈತ ಈಗಿನ ಮೂಡಬಿದರೆಯಲ್ಲಿದ್ದನೆಂದು ತಿಳಿದುಬಂದಿದೆ.
ಈತನ ರಚನೆಗಳಲ್ಲಿ ಭರತೇಶ ವೈಭವ ಮುಖ್ಯವಾದದ್ದು.
ಭರತೇಶ ವೈಭವ 80 ಸಂಧಿಗಳಿಂದ ಕೂಡಿರುವ ದೊಡ್ಡ ಸಾಂಗತ್ಯ ಗ್ರಂಥ.
ಭರತೇಶ ವೈಭವದಲ್ಲಿ ಪ್ರಥಮ ತೀರ್ಥಂಕರನಾದ ಪುರುಪರಮೇಶ್ವರನ ಹಿರಿಯ ಕುಮಾರ ಭರತನು ಗಣನೆಯಿಲ್ಲದ ರಾಜ್ಯಸುಖದೊಳೋಲಾಡಿ ಧಾರಿಣಿ ಮೆಚ್ಚಿ ಜನಯೋಗಿಯಾಗಿ ಕ್ಷಣಕೆ ಕರ್ಮವ ಸುಟ್ಟು ಜಿನನಾದ ವೈಭವವನ್ನು ಹೇಳಲಾಗಿದೆ.
ವಿಸ್ತಾರವಾದ ಕಾವ್ಯದಲ್ಲಿ ಚಿತ್ರವಿಚಿತ್ರ ಕಥಾಸರಣಿಯಿದೆ; ನೂತನ ಬಗೆಯ ವರ್ಣನೆಯಿದೆ; ನವರಸ ಪುಷ್ಟಿಯಿದೆ; ತತ್ವವೂ ಇದೆ.
ಕವಿಯ ಅನೇಕ ವಾಕ್ಯಗಳು ಗಾದೆಗಳಂತೆ ಅರ್ಥಗರ್ಭಿತವಾಗಿವೆ.
ಸುಲಭವೂ, ಸರಳವೂ ಆದ ಶೈಲಿಯಲ್ಲಿರುವುದರಿಂದ ಸಾಮಾನ್ಯರೂ ಓದಿ ಆನಂದಿಸಬಹುದಾಗಿದೆ.
ದಾಸ ಸಾಹಿತ್ಯ:
·         ಸುಮಾರು 16ನೆಯ ಶತಮಾನದ ವೇಳೆಗೆ ಕನ್ನಡದಲ್ಲಿ ಹಲವಾರು ವೈಷ್ಣವದಾಸರು ಹಾಡುಗಳನ್ನು ರಚಿಸಿದ್ದರು.
·         ವೀರಶೈವ ವಚನ ಸಾಹಿತ್ಯದಂತೆಯೇ ಹಾಡುಗಳೂ ಭಕ್ತಿಪಂಥದ ತತ್ವ, ನೀತಿಗಳ ಪ್ರಚಾರಕ್ಕಾಗಿಯೇ ಹುಟ್ಟಿದುವು.
·         ವೀರಶೈವರು ಶಿವಪಾರಮ್ಯ ಹೇಳಿದರೆ, ವೈಷ್ಣವರು ವಿಷ್ಣುವನ್ನು ಸ್ತುತಿಸಿದರು.
·         ವೀರಶೈವರದು ವಚನ, ದಾಸರದು ಕೀರ್ತನೆ ಅಥವಾ ದೇವರನಾಮ.
·         ಪುರಂದರದಾಸ, ವಿಜಯದಾಸ, ಕನಕದಾಸ ಮೊದಲಾದ ದಾಸಶ್ರೇಷ್ಠರು ಕೀರ್ತನೆಗಳನ್ನು ಬರೆದು ಹಾಡಿದ್ದಾರೆ.
·         ನಂಬಿ ಭಜಿಸಿದವರಿಗೆ ದೇವರು ತಪ್ಪದೆ ಒಲಿಯುವನು ಎಂಬುದು ಎಲ್ಲ ಭಕ್ತಿಪಂಥಗಳ ತತ್ವ. ಇಂತಹ ದೃಢಭಕ್ತಿ ಲಭಿಸಲು ಸಾಧನೆ ಮಾಡಬೇಕು, ಶುದ್ಧ ಚರಿತ್ರರಾಗಬೇಕು, ವಿಶ್ವಪ್ರೇಮವನ್ನು ಅಭ್ಯಾಸ ಮಾಡಬೇಕು ಹಾಗೂ ಧರ್ಮಾಚರಣೆಯಲ್ಲಿ ತೊಡಗಬೇಕು.
·         ವೈರಾಗ್ಯವನ್ನು ಉಪದೇಶಿಸಿದ್ದರಿಂದ ದಾಸರು ಇಹಲೋಕ ನಿರಸನವನ್ನು ಮಾಡಿ ಜನರಿಗೆ ನಿರುತ್ಸಾಹವನ್ನು ಉಂಟು ಮಾಡಿದರೆಂಬ ಅಪಕೀರ್ತಿ ಅವರಿಗೆ ಬಂದಿದೆ. ಆದರೆ ದಾಸರು ಇಹಜೀವನವನ್ನು ತಿರಸ್ಕರಿಸಲಿಲ್ಲ. ಇಹಲೋಕ ಸುಖವೇ ಪರಮಾರ್ಥವೆಂದು ನೆಚ್ಚಿ ಕೆಡಬಾರದು ಎಂಬುದಾಗಿ ದಾಸರು ಹೇಳಿದ್ದಾರೆ.
·         ಸಂಸಾರದ ಕಷ್ಟ ಕಾರ್ಪಣ್ಯಗಳಿಗೆ ಹೆದರಿ ಸಂನ್ಯಾಸಿಯಾಗಲೆಳಸುವುದು ಹೆಡ್ಡತನ ಎಂದು ಕೀರ್ತನೆಗಳಲ್ಲಿ ಹೇಳಲಾಗಿದೆ.
·         ತ್ರಿಕರಣ ಶುದ್ಧಿಯಿಂದ ಸದಾಚಾರಿಗಳಾಗಬೇಕೇ ಹೊರತು ಬಾಹ್ಯಾಡಂಬರದಿಂದ ಲಾಭವಿಲ್ಲ ಎಂದು ಕೆಲವು ಕೀರ್ತನೆಗಳಲ್ಲಿ ವ್ಯಕ್ತವಾಗಿದೆ.
·         ದಾಸರ ಕೀರ್ತನೆಗಳು ಪುರಾಣೇತಿಹಾಸಗಳಿಂದ ಆರಿಸಿಕೊಂಡ ದೃಷ್ಟಾಂತಗಳಿಂದ ತುಂಬಿವೆ.
·         ಹಾಡುವುದಕ್ಕೆ ಯೋಗ್ಯವಾದ ಭಾಷೆ, ಸುಂದರ ಉಪಮಾನಗಳು, ಜೀವನವಿಮರ್ಶೆ ಮುಂತಾದುವು ಹಾಡುಗಳಿಗೆ ಕಾವ್ಯತ್ವವನ್ನುಂಟು ಮಾಡಿವೆ.