ಸೋಮವಾರ, ಜುಲೈ 29, 2013

ರಾಷ್ಟ್ರಕೂಟ ಮೂರನೆಯ ಕೃಷ್ಣ ಹಾಗೂ ಜುರ ಶಾಸನ

(ಲೇಖಕರು: ಡಾ|| ಎಚ್.ಎಸ್. ಗೋಪಾಲ ರಾವ್)
ಭಾಷೆ ಎಂದರೇನು ಎಂಬ ಪ್ರಶ್ನೆ ಒಂದಲ್ಲ ಒಂದು ಸಂದರ್ಭದಲ್ಲಿ ಎಲ್ಲರನ್ನೂ ಕಾಡುತ್ತದೆ. ಅದು ಮಾತು ಬಲ್ಲವನ ಭಾವನೆಗಳ ಅಭಿವ್ಯಕ್ತಿಗಿರುವ ಸಾಧನ. ಶ್ರವ್ಯವಾದ ಭಾಷೆಗೆ ಚಾಕ್ಷುಷ ರೂಪ ದೊರೆತಾಗ ಲಿಪಿ ಹುಟ್ಟುತ್ತದೆ. ಯಾವುದೇ ವಿಚಾರವನ್ನು ಇತರರೊಡನೆ ವಿನಿಮಯ ಮಾಡಿಕೊಳ್ಳಬೇಕಾದಾಗ ಮಾತು ಮತ್ತು ಬರವಣಿಗೆಯನ್ನು ಬಳಸಿಕೊಳ್ಳುವುದು ರೂಢಿ. ಕನ್ನಡ ಮಾತನಾಡಲು ಬಾರದ, ಕನ್ನಡ ಓದಲು ಬಾರದ ಯಾರಿಗೇ ಆದರೂ ಕನ್ನಡದಲ್ಲಿ ಹೇಳಿ ಅಥವಾ ಬರೆದು ತಿಳಿಸುವುದು ಕಷ್ಟದ ಕೆಲಸ. ಈ ಮಾತು ಎಲ್ಲ ಭಾಷೆ ಮತ್ತು ಲಿಪಿಗಳಿಗೂ ಅನ್ವಯಿಸುತ್ತದೆ. ಕೇವಲ ಕನ್ನಡವನ್ನು ಅರ್ಥಮಾಡಿಕೊಳ್ಳಬಲ್ಲವರಿಗೆ ಇಂಗ್ಲಿಷ್, ಹಿಂದಿ, ತಮಿಳು ಅಥವಾ ಮತ್ತಾವುದೇ ಭಾಷೆಯಲ್ಲಿ ಹೇಳಿದಾಗ ಭಾಷೆಯು ಅಪ್ರಯೋಜಕವಾಗುತ್ತದೆ. ತಿಳಿಸಲೇಬೇಕಾದ ವಿಷಯವು ಪರಸ್ಪರ ವಿನಿಮಯವಾಗುವುದೇ ಇಲ್ಲ. ಆಗ ಭಾಷೆ ಸೋಲುತ್ತದೆ. ಅಂತಹ ಸನ್ನಿವೇಶಗಳಲ್ಲೇ ಲಿಪಿಗೂ ಸೋಲಾಗುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ ತಿಳಿಸಲೇಬೇಕಾಗಿರುವ ವಿಷಯ, ತಿಳಿಯಲೇಬೇಕಾದವರಿಗೆ ತಿಳಿಯುವಂತಾಗಲು ಅವರಿಗೆ ಅರ್ಥವಾಗುವ ಭಾಷೆ ಮತ್ತು ಲಿಪಿಯಲ್ಲೇ ಇರಬೇಕಾದ್ದು ಅವಶ್ಯಕ. ಪರಸ್ಪರ ಪಾರದರ್ಶಕವಾಗಿ ವ್ಯವಹರಿಸಬೇಕು ಎನ್ನುವವರಿಗೆ ಈ ತಿಳಿವಳಿಕೆ ಅವಶ್ಯಕ. ಯಾವುದೇ ಪ್ರದೇಶದಲ್ಲಿ ಆಡಳಿತ ನಡೆಸುವವರಿಗೂ ಈ ಕನಿಷ್ಟ ಪರಿಜ್ಞಾನವಿರಬೇಕು ಎಂದು ನಿರೀಕ್ಷಿಸುವುದು ತಪ್ಪಲ್ಲ. ಅರ್ಥವಾಗದ ಭಾಷೆ ಮತ್ತು ಲಿಪಿಯಲ್ಲಿ ವ್ಯಕ್ತಪಡಿಸಿದ ಯಾವುದೇ ವಿಷಯದ ಬಗ್ಗೆ ಸಂಶಯ ಬಂದರೆ ತಪ್ಪಲ್ಲ; ಅದು ಪಾರದರ್ಶಕ ಅಭಿವ್ಯಕ್ತಿಯಲ್ಲ. ಇದು ಎಲ್ಲ ಕಾಲಕ್ಕೆ, ಎಲ್ಲ ಪ್ರದೇಶಗಳಿಗೆ ಅನ್ವಯಿಸುವ ಮಾತು.
ನಮ್ಮ ಗುರುತಿಗೆ ಇರುವುದು ನಮ್ಮ ಭಾಷೆ. ನಮ್ಮ ವಾಸ ಸ್ಥಳ ಬದಲಾಗುತ್ತಿರುತ್ತದೆ. ನಮ್ಮ ಹೆಸರಿನ ಜೊತೆಗೆ ನಮ್ಮ ಊರಿನ ಹೆಸರು ಅಥವಾ ಕುಟುಂಬದ ಸಂಕೇತವಾದ ಅಕ್ಷರವಿದ್ದರೂ, ನಮ್ಮ ಅಸ್ಮಿತೆ ಇರುವುದು ನಮ್ಮ ಭಾಷೆಯ ಜೊತೆಗೇ ಆದ್ದರಿಂದ ಭಾಷೆಯ ಜೊತೆ ನಮ್ಮನ್ನು ನಾವು ಗುರುತಿಸಿಕೊಳ್ಳುವುದು ಹೆಮ್ಮೆಯ ವಿಷಯ. ಆಳುವ ಜನರಿಗೆ ಈ ಕನಿಷ್ಟ ತಿಳಿವಳಿಕೆ ಇದ್ದರೆ, ಆಳಿಸಿಕೊಳ್ಳುವವರ ಭಾಷೆಯಲ್ಲಿ ಆಡಳಿತ ನಡೆಸುತ್ತಾರೆ. ತಮಗೆ ಮಾತ್ರ ಅರ್ಥವಾಗುವ ಭಾಷೆಯಿಂದ ಜನರನ್ನು ಮುಕ್ತಗೊಳಿಸುತ್ತಾರೆ.
ಹಿಂದೆ ಆಳಿದವರಿಗೆ ಬಹುತೇಕ ಇಂತಹ ತಿಳಿವಳಿಕೆ ಇತ್ತು. ಆದ್ದರಿಂದ ಎಲ್ಲರಿಗೆ ತಿಳಿಸಬೇಕಾದ್ದನ್ನು ಸಾರ್ವಜನಿಕವಾಗಿ, ಲೋಕದ ಭಾಷೆ ಮತ್ತು ಲಿಪಿಯಲ್ಲಿ ತಿಳಿಸಿದ್ದಾರೆ. ಈ ಮಾತಿಗೆ ಉದಾಹರಣೆಯಾಗಿ ಅನೇಕ ಶಾಸನಗಳಿವೆ. ಕೆಲವು ಖಾಸಗಿ, ಅದೂ ಮೇಲ್ವರ್ಗದವರಿಗೆ ಸಂಬಂಧಿಸಿದ ಖಾಸಗಿ ಆದೇಶಗಳು ಲೋಹ, ಅದರಲ್ಲೂ ತಾಮ್ರ ಪಟ್ಟಿಕೆಗಳ ಮೇಲಿದ್ದು, ಅವುಗಳ ಭಾಷೆ ಸಂಸ್ಕೃತವಾದರೂ, ಬಳಸಿದ ಲಿಪಿ ಕರ್ನಾಟಕದಲ್ಲಿ ಸಾಮಾನ್ಯವಾಗಿ  ಕನ್ನಡವೇ ಆಗಿದೆ.
ಆಳುವವರ ಇಂತಹ ಸಾಮಾನ್ಯ ತಿಳಿವಳಿಕೆಗೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿರುವ ರಾಷ್ಟ್ರಕೂಟ ದೊರೆ ಮೂರನೆಯ ಕೃಷ್ಣನ ಕೆಲವು ತಮಿಳು ಶಾಸನಗಳನ್ನು ನೆನಪು ಮಾಡಿಕೊಳ್ಳುತ್ತಲೇ, ಸಂಸ್ಕೃತಿಯ ಕೊಂಡಿಯಾದ ಭಾಷೆಯು ತನ್ನ ಮಿತಿಗಳನ್ನು ಮೀರಿರುವ ಕೆಲವು ಸಂದರ್ಭಗಳನ್ನೂ ಅವಲೋಕಿಸಬೇಕಾಗುತ್ತದೆ. ರಾಷ್ಟ್ರಕೂಟ ದೊರೆ ಮೂರನೆಯ ಕೃಷ್ಣನ ಜುರ ಶಾಸನವನ್ನು ಈ ನಿಟ್ಟಿನಲ್ಲಿ ಪರಿಶೀಲಿಸುವುದು ಅವಶ್ಯಕ. ಮೊದಲಿಗೆ ಪಲ್ಲವರನ್ನು ಗೆದ್ದು ಕಾಂಚಿ ಮತ್ತು ತಂಜಾವೂರುಗಳನ್ನು ವಶಪಡಿಸಿಕೊಂಡು, ಕಂಚಿಯನ್ನು ವಶಪಡಿಸಿಕೊಂಡ ನೆನಪಿಗೆ ಕಚ್ಚೆಗಎಂಬ ಬಿರುದನ್ನು ತನ್ನ ಹೆಸರಿನ ಜೊತೆಗೆ ಸೇರಿಸಿಕೊಂಡ ಮೂರನೆಯ ಕೃಷ್ಣ, ಉತ್ತರದಲ್ಲೂ ಕೆಲವು ಪ್ರದೇಶಗಳನ್ನು ಆಕ್ರಮಿಸಿಕೊಂಡಿದ್ದ. ತಮಿಳುನಾಡಿನಲ್ಲಿ ಜನತೆಯ ತಿಳಿವಳಿಕೆಗೆ ಬರಲಿ ಎಂಬ ಕಾರಣದಿಂದ ತಮಿಳು ಭಾಷೆಯಲ್ಲೇ ಶಾಸನಗಳನ್ನು ಹಾಕಿಸಿದ ಮೂರನೆಯ ಕೃಷ್ಣ, ಮಹಾರಾಷ್ಟ್ರ ಮತ್ತು ಉತ್ತರ ಭಾರತದಲ್ಲಿ ಸಂಸ್ಕೃತ ಭಾಷೆ ಮತ್ತು ಹೆಚ್ಚಿಗೆ ನಾಗರಿ ಲಿಪಿಯಲ್ಲಿ ಶಾಸನಗಳನ್ನು ಹಾಕಿಸಿದ್ದಾನೆ. ಇದು ಒಪ್ಪಬೇಕಾದ ಕ್ರಮ. ಆದರೆ ಮಧ್ಯಪ್ರದೇಶದ ಜಬ್ಬಲ್‌ಪುರ ಜಿಲ್ಲೆಯ ಈಶಾನ್ಯದ ಗಡಿಭಾಗದಲ್ಲಿರುವ ಜುರ ಎಂಬ ಗ್ರಾಮದಲ್ಲಿ ಒಂದು ಅಪರೂಪದ ಶಿಲಾಶಾಸನವಿದೆ. ಇದು ಕರ್ನಾಟಕದಿಂದ ಬಹಳ ಎನ್ನುವಷ್ಟು ದೂರದ ಸ್ಥಳದಲ್ಲಿರುವ ಕನ್ನಡ ಭಾಷೆ ಮತ್ತು ಲಿಪಿಯ ಶಾಸನ. ಇದು ಕನ್ನಡಿಗರು ತಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡುವ ವಿಷಯವನ್ನೊಳಗೊಂಡಿದೆ. ಯಾರಾದರೂ ಕನ್ನಡಿಗರ ಸಂಸ್ಕೃತಿಯ ಬಗ್ಗೆ ಕೇಳಿದರೆ ಉದಾಹರಿಸಲೇಬೇಕಾದ ಮಹತ್ವದ ಶಾಸನ. ಬಹಳ ಮುಖ್ಯವಾದ ವಿಚಾರವೆಂದರೆ ಇದು ದಾನಶಾಸನವಲ್ಲ; ಇದೊಂದು ಅಪರೂಪದ ಪ್ರಶಸ್ತಿ ಶಾಸನ. ಯಾರೋ ರಾಜ ಅಥವಾ ಅಧಿಕಾರಿ ಹಾಕಿಸಿರುವ ಶಾಸನ ಇದಲ್ಲ. ಬಹುತೇಕ, ಸಾಮಾನ್ಯ ವರ್ಗಕ್ಕೆ ಸೇರಿದ ವ್ಯಕ್ತಿಯೊಬ್ಬ ಹಾಕಿಸಿರುವ ಈ ಪ್ರಶಸ್ತಿಯು ರಾಷ್ಟ್ರಕೂಟ ದೊರೆ ಮೂರನೆಯ ಕೃಷ್ಣನನ್ನು ಕುರಿತಿರುವುದು ವಿಶೇಷ.
ಮೂರನೆಯ ಕೃಷ್ಣನು ಉತ್ತರ ಬಾರತದಲ್ಲಿ ಬುಂದೇಲ್‌ಖಂಡವನ್ನು ಗೆದ್ದು, ಉಜ್ಜಯಿನಿಯನ್ನೂ ವಶಪಡಿಸಿಕೊಂಡ ಎಂಬುದು ಇತಿಹಾಸ. ಹಾಗೆ ಉತ್ತರ ಭಾರತದ ಕೆಲವು ಭಾಗಗಳನ್ನು ವಶಪಡಿಸಿಕೊಂಡ ಮೂರನೆಯ ಕೃಷ್ಣ ಆ ಪ್ರಧೇಶಗಳನ್ನು ಆಳಿದನೆ ಎಂಬ ಪ್ರಶ್ನೆಗೆ ಉತ್ತರ ಹೇಳುವುದು ಕಷ್ಟ. ಇಲ್ಲ ಎನ್ನಲಾಗಲೀ, ಹೌದು ಎನ್ನಲಾಗಲೀ ಸಾಕ್ಷಿಗಳು ಇಲ್ಲ. ತಮಿಳುನಾಡು ಅವನ ಆಳ್ವಿಕೆಗೆ ಸೇರಿದ್ದ ಕಾರಣದಿಂದ ಅವನ ಶಾಸನಗಳು ತಮಿಳುನಾಡಿನಲ್ಲಿವೆ ಮತ್ತು ಅವು ತಮಿಳು ಭಾಷೆಯಲ್ಲೇ ಇವೆ. ಮಧ್ಯ ಪ್ರದೇಶದ ಜುರದಲ್ಲಿ ಸಿಕ್ಕಿರುವ ಶಾಸನ ಕನ್ನಡ ಭಾಷೆ ಮತ್ತು ಲಿಪಿಯಲ್ಲಿರುವುದು ವಿಶೇಷ. ಈ ಭಾಗದಲ್ಲಿ ಈಗಂತೂ ಕನ್ನಡಿಗರಿಲ್ಲ. ಆ ಕಾಲಕ್ಕೂ ಇದ್ದಿರುವ ಸಾಧ್ಯತೆಗಳು ಕಡಿಮೆ. ಮಹಾರಾಷ್ಟ್ರದ ಗೋದಾವರಿಯವರೆಗಿನ ಪ್ರದೇಶದಲ್ಲಿ ಕನ್ನಡದ ನೆಲೆಗಳನ್ನು ಹುಡುಕುವುದು ಸಾಧ್ಯವಾಗಬಹುದು. ಮಧ್ಯಪ್ರದೇಶದ ದಕ್ಷಿಣದಲ್ಲೂ ಪ್ರಯತ್ನಿಸಿದರೆ ಕನ್ನಡದ ನೆಲೆಗಳ ಸುಳಿವು ದೊರೆಯಬಹುದು; ಆದರೆ ಅದಕ್ಕಿಂತ ಮೇಲೆ ಕನ್ನಡದ ನೆಲೆಗಳನ್ನು ಹುಡುಕುವುದು ಸುಲಭವಲ್ಲ. ಕನ್ನಡಿಗರು ನೇಪಾಳದಲ್ಲೂ, ಬಂಗಾಳದಲ್ಲೂ, ಗುಜರಾತಿನಲ್ಲೂ ರಾಜ್ಯಗಳನ್ನು ಆಳಿದ್ದಾರೆ; ಆದರೆ ಅದು ಅವರ ಮೂಲನೆಲೆಯಾಗಿರಲಿಲ್ಲ. ಇಂತಹ ಸಂದರ್ಭದಲ್ಲಿ ಮಧ್ಯಪ್ರದೇಶದ ಈಶಾನ್ಯದ ಅಂಚಿನಲ್ಲಿ ಕನ್ನಡ ಶಾಸನ, ಅದರಲ್ಲೂ ರಾಜನೊಬ್ಬನ ಪ್ರಶಸ್ತಿ ಶಾಸನ ದೊರೆತಿರುವುದು ಆಶ್ಚರ್ಯ. ಬಹುಷಃ ಇದನ್ನು ಸಮರ್ಥಿಸಿಕೊಳ್ಳಲು ಈ ಕೆಳಕಂಡಂತೆ ಸಮಾಧಾನ ಪಡೆಯಬಹುದು. ಮೂರನೆಯ ಕೃಷ್ಣನ ಸೈನ್ಯದ ಜೊತೆಗೆ ಹೋಗಿದ್ದ ಸೈನಿಕರಲ್ಲಿ ಕೆಲವರು ಯಾವುದೋ ಕಾರಣದಿಂದ ಅಲ್ಲೇ ಉಳಿಯಬೇಕಾದ ಸಂದರ್ಭ ಒದಗಿರಬಹುದು. ಅವರಿಗೆ ತಿಳಿದಿದ್ದ ಭಾಷೆ ಮತ್ತು ಲಿಪಿ ಕನ್ನಡ ಮಾತ್ರ. ಆದ್ದರಿಂದ ತಮ್ಮ ಒಡೆಯನ ಪ್ರಶಸ್ತಿಯನ್ನು ತಮ್ಮ ಜೊತೆಗೆ ಇಟ್ಟುಕೊಂಡಿರುವ ಸಲುವಾಗಿ ಈ ಶಿಲಾಶಾಸನ ಸಿದ್ಧವಾಗಿರಬೇಕು. ಆ ತಂಡದಲ್ಲಿ ಒಬ್ಬ ಕವಿಯೂ ಇದ್ದಿರಬಹುದಾದ ಸಾಧ್ಯತೆ ಇರುವುದರಿಂದ ಪ್ರಶಸ್ತಿಯು ಸಹಜವಾಗಿ ಕಾವ್ಯಶೈಲಿಯಲ್ಲಿ ರಚನೆಗೊಂಡಿರುವ ಸಾಧ್ಯತೆಗಳಿವೆ. ಯಾವ ಕಾರಣದಿಂದ ಅಲ್ಲಿ ಶಾಸನ ಸಿದ್ಧವಾಯಿತೋ ಅಥವಾ ಉಳಿಯಿತೋ ಎಂಬ ಕಾರಣದ ಬಗ್ಗೆ ಚರ್ಚಿಸುವುದರ ಬದಲು ಶಾಸನದಲ್ಲಿನ ಸಾಂಸ್ಕೃತಿಕ ವಿಚಾರಗಳನ್ನು ಹೆಮ್ಮೆಯಿಂದ ಮೆಲುಕುಹಾಕುವುದು ಒಳಿತು.
ಮೂರನೆಯ ಕೃಷ್ಣನನ್ನು ನಲ್ಲರಮರುಳ’, ‘ಆನೆವೆಡಂಗ’, ‘ಪರಾಂಗನಾಪುತ್ರ’, ‘ಕಚ್ಚೆಗ’, ಎಂದು ವರ್ಣಿಸುವ ಶಾಸನವು, ಅಷ್ಟು ದೂರದಲ್ಲಿಯೂ, ಕನ್ನಡಿಗರ ಸಾಂಸ್ಕೃತಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ. ಕಂದಪದ್ಯಗಳೂ ಇರುವ ಶಾಸನ ಪಾಠದಲ್ಲಿ ಕಚ್ಚೆಗಎಂಬ ಶಬ್ದವು ಕಂಚಿಯನ್ನು ಗೆದ್ದವನು ಎಂಬ ಅರ್ಥ ನೀಡಿ ಮೂರನೆಯ ಕೃಷ್ಣನ ರಾಜಕೀಯ ಪ್ರಾಬಲ್ಯವನ್ನು ಸ್ಪಷ್ಟಪಡಿಸುತ್ತದೆ. ಸೋಲದೆ ಪರವನಿತೆಗೆ ಕಣ್ಸೋಲದು | ಮೊಲೆವಾಲನೂಡಿ ನಡಪಿದ ತಾಯಿಂ || ಮೇಲೆನೆ ಬಗೆಗುಂ ನೋಡಿರೆ | ಸೋಲದು ಚಿತ್ತಂ ಪರಾಂಗನಾ ಪುತ್ರಕನ || ಎಂಬ ಕಂದಪದ್ಯದಲ್ಲಿ ಕೃಷ್ಣನಿಗೆ ಪರವನಿತೆಯರನ್ನು ಕಂಡಾಗ ಅವನ ಕಣ್ಣು ಕೂಡಾ ಸೋಲುತ್ತಿರಲಿಲ್ಲ ಮತ್ತು ಅಂತಹ ಸಂದರ್ಭದಲ್ಲಿ ಅವನಿಗೆ ಆಕೆಯು ಮೋಲೆಹಾಲನ್ನು ಕೊಟ್ಟು ಸಾಕಿದ ತಾಯಿಗಿಂತ ಹೆಚ್ಚು ಎಂಬ ಭಾವ ಇರುತ್ತಿತ್ತು ಎಂಬ ಮಾತು ಕೃಷ್ಣನ ದೊಡ್ಡತನವನ್ನು ದಾಖಲಿಸಿದೆ. ಅಷ್ಟೇ ಅಲ್ಲದೆ, ಪರವಧುವನ್ನು ಕಂಡಾಗ ಕೃಷ್ಣನಿಗೆ ನೋಡಿರೆ ಪರವಧುಗೆ ಮನಂ ಕೂಡದು, ಸೂೞ್ಸೊೞೊಳೆತ್ತಿ ನಡಪಿದ ತೋಳುಣ್ಡಾಡಿದ ಮೊಲೆ, ಬಸಿಱೊಳಗಿೞ್ದಾಡಿದ ಚಿತ್ತಂ ಪರಾಂಗನಾ ಪುತ್ರಕನ ಎಂಬ ಮಾತುಗಳಲ್ಲಿ ಕೃಷ್ಣನ ವ್ಯಕ್ತಿತ್ವ ಮತ್ತಷ್ಟು ಆಪ್ತವಾಗುತ್ತದೆ. ಕೃಷ್ಣನಿಗೆ ಪರವಧುವನ್ನು ಕಂಡಾಗ ಮನಸ್ಸೂ ಕೂಡುತ್ತಿರಲಿಲ್ಲ. ಬದಲಿಗೆ ಎತ್ತಿ ನಡೆಸಿದ ತೋಳು, ಉಂಡು ಆಡಿದ ಮೊಲೆ ಮತ್ತು ತಾಯಿಯ ಬಸಿರಿನಲ್ಲಿ ಇದ್ದಾಗ ಆಡಿದ ನೆನಪಾಗುತ್ತಿತ್ತಂತೆ. ಇಂತಹ ಒಬ್ಬ ದೊರೆಯ ಪ್ರತಿನಿಧಿಗಳು ನಾವು ಎಂದು ಹೇಳಿಕೊಳ್ಳಲು ಯಾರಿಗೆ ತಾನೆ ಹೆಮ್ಮೆಯಾಗುವುದಿಲ್ಲ. ಈ ಪ್ರಶಸ್ತಿ ಶಾಸನವನ್ನು ಬರೆಯಿಸಿದ ಉಬ್ಬಿಕಾಮೈ ಸೆಟ್ಟಿಯ ತಮ್ಮ ತುಯ್ಯಲ ಚಂದಯ್ಯ ಮತ್ತು ಬರೆದ ಏಚಿಮಯ್ಯ ಅಥವಾ ಚಿಮ್ಮಯ್ಯ ಇಬ್ಬರೂ ಅಲ್ಲೇ ಉಳಿದು, ಈ ಶಾಸನವನ್ನು ದಾಖಲಿಸಿದ್ದಾರೆ ಎಂದು ಊಹಿಸಲು ಅವಕಾಶಗಳಿವೆ. 
ಜುರ ಶಾಸನದ ಪಾಠ
೧.      ಸ್ವಸ್ತಿಶ್ರೀಪರಮಭಟ್ಟಾರ
೨.      ಕ ಪರಮೇಶ್ವರ ಶ್ರೀ ಪೃ
೩.      ಥ್ವೀವಲ್ಲಭಮಹಾರಾಜಾಧಿ
೪.      ರಾಜ ನಲ್ಲರಮರುಳನಾ
೫.      ನೆವೆಡಂಗಂ ಚಲಕೆನಲ್ಲಾ
೬.      ತಂ ವೈರಿವಿಳಾಸಂ ಮದಗ
೭.      ಜಮಲ್ದಂ ಪರಾಂಗನಾಪು
೮.      ತ್ರಂ ಗಣ್ಡ ಮಾರ್ತ್ತಣ್ಡನಕಾಳವ
೯.      ರಿಷಂ ನೃಪತುಂಗಂ ಕಚ್ಚೆಗಂ ಶ್ರೀ
೧೦.    ಮತ್ಕನ್ನರದೇವಂ || ಕನ್ದ ||
೧೧.    . ವನಿತೆಯರ್ಕ್ಕ
೧೨.    .ಗಳುಂ ಬಮ
೧೩.    .ಕಣ್ಣುಂ ನೋಡ
೧೪.    ದು ಕಣ್ನುಡಿಯದು ಬಾಯ್ಕೂ
೧೫.    ಡದು ಚಿತ್ತಂ ಪರಾಂಗನಾ
೧೬.    ಪುತ್ರಕನ || || ಭಾರತ
೧೭.    ದೊಳಿಱದನಿನ್ದ್ರನೊಳೋರಾ
೧೮.    ಸನ ಜಾಣನೆನಿಪ ಪಾ
೧೯.    ಣ್ಡ್ಯನ ಕುಲಮಂ ಬೇರಿನ್ದೆ
೨೦.    ಕಿೞ್ತ ಚೋಳನ ಬೇರಂ
೨೧.    ಬೇರಿನ್ದೆ ಕಿೞ್ತನಾನೆವೆ
೨೨.    ಡಙ್ಗಂ || || ಸೋಲದೆ ಪರವ
೨೩.    ನಿತೆಗೆ ಕಣ್ಸೋಲದು ಮೊ
೨೪.    ಲೆವಾಲನೂಡಿ ನಡಪಿದ
೨೫.    ತಾಯಿಂ ಮೇಲೆನೆ ಬಗೆಗುಂ
೨೬.    ನೋಡಿರೆ ಸೋಲದು ಚಿತ್ತಂ
೨೭.    ಪರಂಗನಾ ಪುತ್ರಕನ || ||
೨೮.    ನೋಡಿರೆ ಪರವಧುಗೆ
೨೯.    ಮನಂಕೂಡದು ಸೂೞ್ಸೂ
೩೦.    ೞೊಳೆತ್ತಿ ನಡಪಿದ
೩೧.    ತೋಳುಣ್ಡಾಡಿದ ಮೊಲೆ ಬ
೩೨.    ಸಿಱೊಳಗಿೞ್ಡಾಡಿದ ಚಿತ್ತಂ
೩೩.    ಪರಾಂಗನಾಪುತ್ರಕನ || ||
೩೪.    ಸ್ವಸ್ತಿ || ಉಬ್ಬಿಕಾಮೈಸೆಟ್ಟಿಯ
೩೫.    ತಮ್ಮಂ ತುಯ್ಯಲ ಚನ್ದ
೩೬.    ಯ್ಯಂ ಪ್ರಶಸ್ತಿಯಂ ಬರೆಯಿಸಿ
೩೭.    ದಂ || ಬರೆದನೆಚಿಮ್ಮಯ್ಯಂ ||

ಶಾಸನದ ಭಾವಾರ್ಥ:
ಶುಭವಾಗಲಿ. ಪರಮಭಟ್ಟಾರಕನಾದ, ಭೂಮಿಗೆ ಒಡೆಯನಾದ, ಮಹಾರಾಜರಿಗೆ ರಾಜನಾದ, ಒಳ್ಳೆಯವರಿಗೆ ಹುಚ್ಚು ಹಿಡಿಸುವ, ಆನೆಗಳೊಡನೆ ಆಡುವ, ದೃಢಮನಸ್ಕನಾದ, ಶತ್ರುಗಳೊಡನೆ ಆಟವಾಡುವ, ಮದಿಸಿದ ಆನೆಗಳೊಡನೆ ಹೋರಾಡುವ, ಪರಸ್ತ್ರೀಯರಿಗೆ ಮಗನಾದ, ವೀರರಿಗೆ ವೀರನಾದ, ಅಕಾಲವರ್ಷನಾದ, ನೃಪತುಂಗ ಶ್ರೀಮತ್ಕನ್ನರದೇವನು ಕಂಚಿಯನ್ನು ಗೆದ್ದವನಾಗಿದ್ದಾನೆ.
ಬೇರೆ ಹೆಣ್ಣುಗಳನ್ನು ಕೆಟ್ಟ ರೀತಿಯಲ್ಲಿ ನೋಡುವುದಿಲ್ಲ. ಅವರ ಬಗ್ಗೆ ಯಾವುದೇ ಕೆಟ್ಟ ಮಾತನ್ನಾಡುವುದಿಲ್ಲ. ಈ ಪರಸ್ತ್ರೀಯರ ಮಗನ ಮನಸ್ಸು ಕೂಡಾ ಪರಸ್ತ್ರೀಯರನ್ನು ಕೂಡುವುದಿಲ್ಲ. ಮಹಾಭಾರತದಲ್ಲಿ ಹೋರಾಡಿ ಇಂದ್ರ್ರನೊಡನೆ ಒಂದೇ ಸಿಂಹಾಸನವನ್ನು ಹಂಚಿಕೊಂಡು ಜಾಣನಾದ ಪಾಣ್ಡ್ಯನ ಬೇರನ್ನು ಕಿತ್ತ ಚೋಳನ ಬೇರನ್ನು ಕಿತ್ತವನು ಈ ಆನೆವೆಡಂಗ.
ಪರವನಿತೆಗೆ ಕಣ್ಣೂ ಸೋಲುವುದಿಲ್ಲ. ಅವರನ್ನು ಕಂಡಾಗ, ಅವರು ಮೊಲೆಹಾಲನ್ನು ಕೊಟ್ಟು ಸಲಹಿದ ತಾಯಿಗಿಂತಲೂ ಮೇಲು ಎಂದು ಭಾವಿಸುತ್ತಿದ್ದ.

ಈ ಪರಾಂಗನಾಪುತ್ರಕನಿಗೆ, ಪರವಧುವನ್ನು ನೋಡಿದಾಗ, ತನ್ನನ್ನು ಎತ್ತಿ ಆಡಿಸಿದ ತಾಯಿಯ ತೋಳು, ಅವಳ ಮೊಲೆಹಾಲನ್ನು ಕುಡಿಯುವಾಗ ಮೊಲೆಯೊಡನೆ ಆಡಿದ ಆಟ, ಬಸಿರಿನಲ್ಲಿದ್ದಾಗ ಆಡಿದ ಆಟ ನೆನಪಾಗುತ್ತಿತ್ತು. ಈ ಪ್ರಶಸ್ತಿಯನ್ನು ಬರೆಯಿಸಿದವನು ಉಬ್ಬಿಕಾಮೈಸೆಟ್ಟಿಯ ತಮ್ಮ ತುಯ್ಯಲ ಚಂದಯ್ಯ. ಬರದವನು ಚಿಮ್ಮಯ್ಯ. (ಏಚಿಮ್ಮಯ್ಯ).